ಹೊನ್ನಾವರ: ಶಾಲೆಗಳಿಗೆ ಸರ್ಕಾರದಿಂದ ಬರುವ ಹಣ ಸೀಮಿತವಾಗಿರುವುದರಿಂದ ಶಾಲೆಯ ಭೌತಿಕ ಅಭಿವೃದ್ಧಿಯನ್ನು ಮಾಡುವುದು ಕಷ್ಟಸಾಧ್ಯವಾಗಿದೆ. ಸಂಘ ಸಂಸ್ಥೆಗಳ ನೆರವಿನಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಭಾಸ್ಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹೂವಿನಹೊಳೆ ಪ್ರತಿಷ್ಠಾನದ ಮೂಲಕ ಆಟೋಸ್ ಗ್ಲೋಬಲ್ ಸರ್ವಿಸಸ್ ಕಂಪನಿಯು ಅನುಷ್ಠಾನಗೊಳಿಸಿದ ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಂಪನಿಯ ನೀಡಿದ ಹಣದಿಂದ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಅತ್ಯಂತ ಸಂತಸದ ಸಂಗತಿ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಿಎಸ್ಆರ್ ಕೊಡುಗೆಯಿಂದ ನಿರ್ಮಾಣವಾದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಆಟೋಸ್ ಗ್ಲೋಬಲ್ ಸರ್ವಿಸಸ್ ಕಂಪನಿಯ ಇಂಜಿನಿಯರ್ ವಿನಾಯಕ ಭಾಗ್ವತ ಮಾತನಾಡಿ, ಆಶಯ ಮಾತನಾಡಿ, ಸರ್ಕಾರದಿಂದ ಶಿಕ್ಷಣ ಕ್ಷೇತ್ರಕ್ಕೆ ಅತ್ಯಲ್ಪ ಅನುದಾನ ದೊರಕುತ್ತಿದ್ದು, ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ರಾಜಕಾರಣಿಗಳು ಇಚ್ಛಾಶಕ್ತಿಯನ್ನು ತೋರಬೇಕು. ಭಾಸ್ಕೇರಿ ಶಾಲೆಗೆ ಎನ್ಜಿಒದಿಂದ ಸುಸಜ್ಜಿತ ಕಂಪೌಂಡ, ಸ್ಮಾರ್ಟ್ ಕ್ಲಾಸ್ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಶಾಲೆಯ ‘ನಲುಮೆ’ ಹಸ್ತಪತ್ರಿಕೆ ಪತ್ರಿಕೆ ಬಿಡುಗಡೆಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಸ್ ನಾಯ್ಕ ಮಾತನಾಡಿ, ಶಾಲೆಯನ್ನು ಉಳಿಸಿಕೊಂಡು ಹೋಗುವುದು ಊರಿನವರ ಪಾಲಕರು ಜವಾಬ್ದಾರಿ. ಹಾಗೆ ಶಾಲೆಯ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ತಿಳಿಸಿದರು. ಹೂವಿನಹೊಳೆ ಪ್ರತಿಷ್ಠಾದ ಸಂಸ್ಥಾಪಕ ಅಧ್ಯಕ್ಷ ನಂದಿ ಹೂವಿನಹೊಳೆ ಇವರು ಸಿಎಸ್ಆರ್ ಕೊಡುಗೆಯ ಅನುಷ್ಠಾನದ ಕುರಿತು ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಸದಸ್ಯರಾದ ಗೀತಾ ಹೆಗಡೆ, ಕಿರಣ ಹೆಗಡೆ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಇಸಿಒ ಪ್ರಮೋದ ನಾಯ್ಕ, ಜಿ.ವಿ.ಭಟ್, ಎಸ್ಡಿಎಂಸಿ ಅಧ್ಯಕ್ಷ ಗಣಪತಿ ಮಡಿವಾಳ ಇದ್ದರು. ಮುಖ್ಯಾಧ್ಯಾಪಕಿ ಸರಸ್ವತಿ ಹೆಗಡೆ ಸ್ವಾಗತಿಸಿದರು. ಪ್ರತಿಮಾ ಹೆಗಡೆ ವಂದಿಸಿದರು. ಸಿಆರ್ಪಿ ಈಶ್ವರ ಭಟ್ ನಿರ್ವಹಿಸಿದರು. ಅತಿಥಿ ಶಿಕ್ಷಕರಾದ ಸಂಗೀತಾ ಮುಕ್ರಿ ಮತ್ತು ನಾಗರತ್ನ ಹೆಗಡೆ ಸಹಕರಿಸಿದರು. ಎಸ್ಡಿಎಂಸಿ ಸದಸ್ಯರು ಪಾಲಕರು, ಪೋಷಕರು, ಊರ ನಾಗರಿಕರು, ವಿದ್ಯಾರ್ಥಿಗಳು ಇದ್ದರು.