ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಶಿರಸಿ ಘಟಕದಿಂದ ಹಕ್ಕೊತ್ತಾಯ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ವಿಶಾಲವಾಗಿದ್ದು, ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ವಿದ್ಯಾರ್ಥಿಗಳು, ಪಾಲಕರು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಕಚೇರಿ ಕೆಲಸಕ್ಕೆ ಸುಮಾರು 180 ಕಿಮೀ ದೂರವಿರುವ ಕಾರವಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿಗೆ ತೆರಳುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಸಮಯ ಕೂಡ ವ್ಯರ್ಥವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವಾಗ ಕಾರವಾರದಿಂದ ಗೌಪ್ಯ ಸಾಮಗ್ರಿಗಳ ಸಾಗಾಟಕ್ಕೆ ಮಳೆಗಾಲದಲ್ಲಿ ತುಂಬಾ ಅನಾನುಕೂಲವಾಗುತ್ತದೆ. ಅತಿ ಹೆಚ್ಚು ಮಳೆ ಬೀಳುವ ಗುಡ್ಡಗಾಡು ಪ್ರದೇಶದ ಜಿಲ್ಲೆಯ ಈ ತಾಲೂಕುಗಳನ್ನು, ಶೈಕ್ಷಣಿಕ ಜಿಲ್ಲೆಯ ಭಾಗದಲ್ಲಿ ಪರಿಗಣಿಸಿ, ಆಡಳಿತ ಹಾಗೂ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿಯು ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ, ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಮಂಜೂರಿ ಮಾಡುವುದರಿಂದ ವಿದ್ಯಾರ್ಥಿಗಳು, ಪಾಲಕರು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ. ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯು ಕಾರ್ಯನಿರ್ವಹಿಸುತ್ತಿದ್ದು, ಅದರಂತೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿಯೂ ಈ ಕೆಳಗಿನ ಹುದ್ದೆಗಳೊಂದಿಗೆ ಉಪ ನಿರ್ದೇಶಕರು-1, ಶಾಖಾಧಿಕಾರಿಗಳು-1, ಅಧೀಕ್ಷಕರು-1, ಎಫ್ಡಿಎ-2, ಎಸ್.ಡಿ.ಎ-2, ಗ್ರೂಪ್-ಡಿ-2,ಉಪ ನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡುವಂತೆ ವಿದ್ಯಾರ್ಥಿಗಳು, ಪಾಲಕರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ನೌಕರರ ಪರವಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಅಧ್ಯಕ್ಷ ದಿವಾಕರ ನಾಯ್ಕ, ಕಾರ್ಯಾಧ್ಯಕ್ಷ ಜೆ.ಪಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಾಚಾರ್ಯರಾದ ಬಾಲಚಂದ್ರ ಭಟ್ಟ, ಡಿ.ಜಿ.ಹೆಗಡೆ, ನರೇಂದ್ರ ನಾಯ್ಕ, ರಮೇಶ ಶೆಟ್ಟಿ ಮತ್ತಿತರರು ಇದ್ದರು.