ಹಳಿಯಾಳ : ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅನುದಾನದಲ್ಲಿ ಮಂಜೂರಾದ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲಾ (ಎಸ್.ಟಿ) ಹಾಗೂ ಜೋಗನಕೊಪ್ಪ ಗ್ರಾಮದಲ್ಲಿ ಡಾ.ಬಿ ಆರ್.ಅಂಬೇಡ್ಕರ್ ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಮಂಗಳವಾರ ಶಾಸಕರಾದ ಆರ್.ವಿ.ದೇಶಪಾಂಡೆ ನೆರವೇರಿಸಿದರು.
ಆ ಬಳಿಕ ಲೋಕೋಪಯೋಗಿ ಇಲಾಖೆಯ ಆಶ್ರಯದಲ್ಲಿ ಹಳಿಯಾಳ ತಾಲೂಕಿನ ಮುಂಡಗೋಡ-ಅಣಸಿ ರಾಜ್ಯ ಹೆದ್ದಾರಿ 46 ರ (ಹಳಿಯಾಳ-ಕಲಘಟಗಿ ರಸ್ತೆಯ ಜನಗಾ ಕ್ರಾಸ್ ಹತ್ತಿರ) ಅಪಾಯಕಾರಿ ತಿರುವು ಹಾಗೂ ರಸ್ತೆ ಸುಧಾರಣಾ ಕಾಮಗಾರಿಗೆ ಆರ್.ವಿ.ದೇಶಪಾಂಡೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ತಾಲೂಕಿನ ಖಾನಾಪುರ-ತಾಳಗುಪ್ಪಾ ರಾಜ್ಯ ಹೆದ್ದಾರಿ 93 ರ ವಿ.ಡಿ.ಐ.ಟಿ ಮಹಾವಿದ್ಯಾಲಯದ ಕ್ರಾಸ್‌ನಿಂದ ಕೆಸರೊಳ್ಳಿ ಕ್ರಾಸ್‌ವರೆಗೆ ಹಾಗೂ ಸೂಪಾ-ಅಣ್ಣಿಗೇರಿ ರಾಜ್ಯ ಹೆದ್ದಾರಿ 28ರ ಕೆಸರೊಳ್ಳಿ ಕ್ರಾಸ್‌ನಿಂದ ಕರ್ಕಾವರೆಗೆ ಸಂಪರ್ಕಿಸುವ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಮಂಗಳವಾರ ಆರ್.ವಿ.ದೇಶಪಾಂಡೆ ಭೂಮಿ ಪೂಜೆ ಕೈಗೊಂಡು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಸಾರಿಗೆ ಇಲಾಖೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಉಪ ವಿಭಾಗ ಇವರ ಸಹಯೋಗದಲ್ಲಿ ಹಳಿಯಾಳ ಪಟ್ಟಣದ ಬಸ್ ನಿಲ್ದಾಣದ ಆವರಣಕ್ಕೆ ಸಿಮೆಂಟ್ ಕಾಂಕ್ರಿಟ್, ಆರ್.ಸಿ.ಸಿ. ಡಕ್ಟ್ ಹಾಗೂ ಉಪಹಾರ ಗೃಹದ ಚರಂಡಿ ವ್ಯವಸ್ಥೆ ಮತ್ತು ತೆರೆದ ಆರ್.ಸಿ.ಸಿ ಚರಂಡಿ ನಿರ್ಮಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಸಂಜೆ ಶಾಸಕರಾದ ಆರ್.ವಿ.ದೇಶಪಾಂಡೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ಪುರಸಭೆ ಸದಸ್ಯರು,ಮುಖಂಡರು, ಹಳಿಯಾಳ ಸಾರಿಗೆ ಘಟಕದ ವ್ಯವಸ್ಥಾಪಕರು ಹಾಗೂ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.