ಕನ್ನಡ ವೈಶ್ಯ ಸಮಾಜದ ಯುವಕರನ್ನು ಒಗ್ಗೂಡಿಸುವ ಪ್ರಯತ್ನದ ಪಂದ್ಯಾವಳಿ
ಬೆಂಗಳೂರು: ಕನ್ನಡ ಯಂಗ್ ವೈಶ್ಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎರಡನೇ ಆವೃತ್ತಿಯ ಕ್ರಿಕೆಟ್ ಟೂರ್ನಮೆಂಟ್ ಬೆಂಗಳೂರಿನ ಸತ್ವ ಗ್ಲೋಬಲ್ ಸಿಟಿ ಮೈದಾನದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯಿತು.
ಕನ್ನಡ ವೈಶ್ಯ ಸಮಾಜದ ಬಾಂಧವರನ್ನು ಕ್ರೀಡೆಯ ಮುಖಾಂತರ ಒಂದುಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಯಂಗ್ ವೈಶ್ಯ ಬೆಂಗಳೂರು ಇವರು ಪಂದ್ಯಾವಳಿಯನ್ನು ಆಯೋಜಿಸಿದ್ದರು. ಫೈನಲ್ ಪಂದ್ಯಾವಳಿಯು ಅತ್ಯಂತ ರೋಚಕ ಹಣಾಹಣಿಯಿಂದ ಕೂಡಿದ್ದು ಜೈ ಹಿಂದ್ 11 ಅಂಕೋಲಾ ಹಾಗೂ ರಾಯಲ್ ವೈಶ್ಯ ಬೆಂಗಳೂರು ಮುಖಾಮುಖಿಯಾಗಿದ್ದವು. ಫೈನಲ್ ನಲ್ಲಿ ಜೈ ಹಿಂದ್ 11 ಅಂಕೋಲಾ ತಂಡ ಜಯ ಗಳಿಸಿದರೆ, ರಾಯಲ್ ವೈಶ್ಯ ಬೆಂಗಳೂರು ತಂಡ ರನ್ನರ್ ಅಪ್ ಪಟ್ಟ ಪಡೆದುಕೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ವೈಶ್ಯ ಸಮಾಜದವರಾದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯರಾದ ದಯಾನಂದ ಗೋಕರ್ಣ ಹಾಗೂ ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆ ಮಾಡಿದ ಶಿವಪ್ರಸಾದ ವಿ. ಅವರಿಗೆ ಸಂಘಟಕರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರು ಕನ್ನಡ ವೈಶ್ಯ ಸಂಘದ ಅಧ್ಯಕ್ಷರಾದ ಮಂಜುನಾಥ ಪಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾಗವಹಿಸಿದ ಒಟ್ಟು 8 ತಂಡಗಳಲ್ಲಿನ ಸದಸ್ಯರು ಬಹುತೇಕ ಮೂಲತಃ ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವುದು ವಿಶೇಷ. ಜಿಲ್ಲೆಯ ಕಾರವಾರ, ಅಂಕೋಲಾ, ಅಮದಳ್ಳಿ, ಗೋಕರ್ಣ, ಕುಮಟಾ ಹಾಗೂ ಹುಬ್ಬಳ್ಳಿ ಮೂಲದ ಕನ್ನಡ ವೈಶ್ಯ ಯುವಕರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಜೈ ಹಿಂದ್ 11 ಅಂಕೋಲಾ ತಂಡದ ಹರ್ಷ, ಬೆಸ್ಟ್ ಬೌಲರ್ ಆಗಿ ರಾಯಲ್ ವೈಶ್ಯ ಬೆಂಗಳೂರು ತಂಡದ ಅಮೋಘ ಬನಾರೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜೈ ಹಿಂದ್ 11 ಅಂಕೋಲಾ ತಂಡದ ಹರ್ಷ ಪಡೆದುಕೊಂಡರು.
ಪಂದ್ಯಾವಳಿಯ ಪ್ರೇಕ್ಷಕರಾಗಿ ಕನ್ನಡ ವೈಶ್ಯ ಸಮಾಜದ ಬಾಂಧವರು ಭಾಗವಹಿಸಿದ್ದರು. ಪಂದ್ಯಾವಳಿಯು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಕನ್ನಡ ಯಂಗ್ ವೈಶ್ಯ ಬೆಂಗಳೂರು ಸಮೂಹಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತಗೊಂಡಿವೆ.