ಸಿದ್ದಾಪುರ: ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಗುಡ್ಡೆಕೊಪ್ಪದ ಶ್ರೀಪಾದ ಭಟ್ಟ ಕುಟುಂಬದವರು ನವಚಂಡೀಹವನವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಅನೇಕ ವರ್ಷಗಳ ಕಾಲ ಇಟಗಿ ರಾಮೇಶ್ವರ ದೇವಾಲಯದಲ್ಲಿ ತಾಂತ್ರಿಕರಾಗಿ ಸೇವೆಮಾಡಿರುವ ವೇದಮೂರ್ತಿ ಗಜಾನನ ಭಟ್ಟ ವರಗದ್ದೆ ಮತ್ತು ಅವರ ಪತ್ನಿ ಗಂಗಾ ಇವರನ್ನು ಸನ್ಮಾನಿಸಲಾಯಿತು. ಈ ವೇಳೆ ಅಭ್ಯಾಗತರಾಗಿ ಆಗಮಿಸಿದ್ದ ಶಾಸ್ತ್ರ ವಿದ್ಯಾಸಂಪನ್ನ ವಿದ್ವಾನ್ ಗಂಗಾಧರ ಭಟ್ಟ ಅಗ್ಗೆರೆ ಚಂಡೀಹವನದ ಕುರಿತು ಉಪನ್ಯಾಸನೀಡಿದರು.
ಸನ್ಮಾನಿತರಾದ ಗಜಾನನ ಭಟ್ಟರ ಕುರಿತು ಅಭಿನಂದನಾ ನುಡಿಗಳನ್ನಾಡಿದ ಗಂಗಾಧರ ಭಟ್ಟರು, ಸನ್ಮಾನಿತರು ಅಪೂರ್ವ ಸೌಜನ್ಯವಂತರು. ಅವರಿಗೆ ಮಾಡಿದ ಸನ್ಮಾನ ಸೌಜನ್ಯಕ್ಕೂ ಸಂಮಾನವಿದೆ ಎಂದು ಸಮಾಜಕ್ಕೆ ನೀಡಿದ ಸಂದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಮತಿ ಇಂದಿರಾ ಮತ್ತು ಶ್ರೀಪಾದ ಭಟ್ಟ ಹಾಗೂ ಕುಟುಂಬದ ಸದಸ್ಯರು, ವಿ. ಮಹಾಬಲೇಶ್ವರ ಭಟ್ಟ ಹಿರೇಕೈ ಮುಂತಾದ ಹಿರಿಯ ವೈದಿಕರು ಮತ್ತು ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು. ವಿ. ಶೇಷಗಿರಿ ಭಟ್ಟ ಗುಂಜಗೋಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಲ್ಲವಿ ಭಟ್ಟ ಸನ್ಮಾನ ಪತ್ರ ವಾಚಿಸಿದರು.