Slide
Slide
Slide
previous arrow
next arrow

ದಾಂಡೇಲಿಯಲ್ಲಿ 70ನೇ ವನ್ಯಜೀವಿ ಸಪ್ತಾಹ ಸಮಾರೋಪ

300x250 AD

ಭೂಮಿಗೆ ಅರಣ್ಯ, ಪರಿಸರಕ್ಕೆ ವನ್ಯಪ್ರಾಣಿಗಳೇ ಭೂಷಣ : ಸಚಿವ ಈಶ್ವರ ಖಂಡ್ರೆ

ದಾಂಡೇಲಿ : ಎಲ್ಲ ಜೀವ ವೈವಿಧ್ಯತೆಗಳ ತಾಣವಿದ್ದರೆ ಅದು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ ಪರಿಸರ ಈ ನಾಡಿಗೆ ರಾಷ್ಟ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಭೂಮಿಗೆ ಅರಣ್ಯ ಭೂಷಣ, ಅರಣ್ಯಕ್ಕೆ ವನ್ಯ ಪ್ರಾಣಿಗಳೇ ಭೂಷಣ. ಈ ನಿಟ್ಟಿನಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ರಾಜ್ಯ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಅವರು ಬುಧವಾರನಗರದ ಹಾರ್ನಬಿಲ್ ಸಭಾಭವನದಲ್ಲಿ ನಡೆದ 70ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಚ್ಛ ಹಾಗೂ ಸಮೃದ್ಧ ಪರಿಸರದಿಂದ ಕಂಗೊಳಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಪತ್ತು ನಮ್ಮ ನಾಡಿನ ಮಹತ್ವದ ಆಸ್ತಿಯಾಗಿದೆ. ನಾಡಿಗೆ ಬೆಳಕು ಕೊಟ್ಟಿರುವಂತಹ ಪ್ರದೇಶವಿದು. ಇಲ್ಲಿಯ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಬಹುಮುಖ್ಯವಾಗಿದೆ. ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. 2015ರೊಳಗಿನ ಮೂರು ಎಕರೆಯೊಳಗಿರುವ ಎಲ್ಲಾ ಅತಿಕ್ರಮಣದಾರರಿಗೆ ಹಕ್ಕು ಪತ್ರವನ್ನು ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಮೂರು ಎಕರೆಗಳಿಗಿಂತ ಹೆಚ್ಚು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್, ಹೋಂಸ್ಟೇ ನಿರ್ಮಾಣ ಮಾಡಿರುವುದರ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ವನ್ಯಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಗೆ ನೀಡಬೇಕಾದ ಪರಿಹಾರ ಧನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹಾವು ಕಡಿತಕ್ಕೊಳಗಾದವರಿಗೆ ಪರಿಹಾರ ಧನವನ್ನು ನೀಡುವ ನಿಟ್ಟಿನಲ್ಲಿಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು. ಸದೃಢ ಆರೋಗ್ಯದ ಜೊತೆಗೆ ಮುಂದಿನ ತಲೆಮಾರಿಗೆ ಈ ಸಮೃದ್ಧ ಅರಣ್ಯ ಮತ್ತು ಜೀವ ವೈವಿಧ್ಯತೆಗಳನ್ನು ಉಳಿಸಬೇಕಾದ ಮಹೋನ್ನತ ಜವಾಬ್ದಾರಿಯುತ ಕಾರ್ಯದಲ್ಲಿ ನಾವು ನೀವೆಲ್ಲರೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು.ಎಸ್.ವೈದ್ಯ ಅವರು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ನಮ್ಮ ಮನವಿಗೆ ಸದಾ ಸ್ಪಂದಿಸುತ್ತಿದ್ದಾರೆ. ಕೇಂದ್ರ ಸರಕಾರದ ಒತ್ತಡವಿದ್ದರೂ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿರುವ ಸಚಿವ ಈಶ್ವರ ಖಂಡ್ರೆಯವರ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಇಂಥ ಮಹತ್ವದ ನಿರ್ಧಾರವನ್ನು ಕೈಗೊಂಡ ಈಶ್ವರ ಖಂಡ್ರೆ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರವನ್ನು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುವುದರ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಇತಿಶ್ರೀಯನ್ನು ಹಾಡಬೇಕು. ವನ್ಯಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಗೆ ನೀಡುವ ಪರಿಹಾರ ಮತ್ತು ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಗಂಭೀರ ಗಾಯಗೊಂಡವರಿಗೆ ನೀಡುವ ಪರಿಹಾರ ಧನದ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಹಾವು ಕಡಿತಕ್ಕೊಳಗಾದವರಿಗೂ ಪರಿಹಾರ ಧನವನ್ನು ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅರಣ್ಯ ಸಚಿವರಿಗೆ ಮನವಿಯನ್ನು ಮಾಡಿದರು. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯವನ್ನು ನೀಡುವ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಆದ್ಯತೆಯಡಿ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೆನರಾ ವೃತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರು ಇಲ್ಲಿಯ ಅರಣ್ಯ ಮತ್ತು ವನ್ಯ ಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಕೊಡುಗೆ ಅಪಾರವಾಗಿದೆ ಎಂದರು.

300x250 AD

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಿವಿಧ ಸಸ್ಯಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಐವರು ಸಿಬ್ವಂದಿಗಳಿಗೆ ಅತ್ಯುತ್ತಮ ಸಸ್ಯಕ್ಷೇತ್ರ ನಿರ್ವಾಹಕ ಪ್ರಶಂಸನಾ ಪತ್ರವನ್ನು ನೀಡಲಾಯಿತು. ಜಿಲ್ಲೆಯ ಒಟ್ಟು 14 ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶದ ಚೆಕ್ಕನ್ನು ವಿತರಿಸಲಾಯಿತು. 70ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಚಿವ ಈಶ್ವರ ಖಂಡ್ರೆ ಅವರು ಬಹುಮಾನವನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಕ್ಷಿಗಳ ಸರ್ವೆ ವರದಿಯನ್ನು ಅನಾವರಣಗೊಳಿಸಲಾಯಿತು. ಶಿರಸಿ ವಿಭಾಗದಿಂದ ಕೆರೆ ಮತ್ತು ಜೇನಿನ ವಿವಿಧ ಪ್ರಬೇಧಗಳು ಹಾಗೂ ಮಧುವನ ನಿರ್ವಹಣೆ ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಚಿವರುಗಳಾದ ಈಶ್ವರ ಖಂಡ್ರೆ ಮತ್ತು ಮಂಕಾಳು.ಎಸ್.ವೈದ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕುಮಾರ್ ಪುಷ್ಕರ್, ದಾಂಡೇಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ ಮೊದಲಾದವರು ಉಪಸ್ಥಿತರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಕೆ.ಸಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ವನ್ಯಜೀವಿ ಇಲಾಖೆಯ ನಿರ್ದೇಶಕರಾದ ನಿಲೇಶ ಶಿಂದೆ ಅವರು ವಂದಿಸಿದರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ ಚೌವ್ಹಾಣ್ ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top