ಸಿದ್ದಾಪುರ: ತಾಲೂಕಿನ ಬಿಕ್ಕಳಸೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾಥಿಗಳ ಸಂಘ ರಚಿಸಿಕೊಂಡ ಸೇತುವೆ ಎನ್ನುವ ವಾಟ್ಸಪ್ ಗ್ರೂಪ್ ನ ಸಹಯೋಗದಲ್ಲಿ ‘ನಮ್ಮ ಶಾಲೆ, ನಮ್ಮ ಕೊಡುಗೆ’ ಎನ್ನುವ ವಿನೂತನ ಕಾರ್ಯಕ್ರಮ ಹಾಗೂ ಗುರುಸನ್ಮಾನ ಕಾರ್ಯಕ್ರಮ ಬಿಕ್ಕಳಸೆಯ ಸಭಾಭವನದಲ್ಲಿ ಜರುಗಿತು.
ಮೆಣಸಿಯ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ರೀಟಾ ಡಿಸೋಜ ಅವರು ತಮ್ಮ ತಂದೆ ಎಂ.ಎಸ್.ಡಿಸೋಜ ಅವರ ನೆನಪಿನಲ್ಲಿ ನೀಡುವ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ಗುಲಾಬಿ ಡಿ.ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಬಿಕ್ಕಳಸೆ ಶಾಲೆಯ ಮುಖ್ಯ ಶಿಕ್ಷಕಿ ಸುಧಾ ಶೇಟ್ ಹಾಗೂ ಹಳೆಯ ವಿದ್ಯಾರ್ಥಿಗಳ ಮೆಚ್ಚಿನ ನಿವೃತ್ತ ಶಿಕ್ಷಕ ಲಕ್ಷ್ಮಣ ನಾಯ್ಕ ಶಿರಳಗಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲೆಯ ನಲಿ ಕಲಿ ಯೋಜನೆಯ ಮಕ್ಕಳಿಗೆ ಅನುಕೂಲವಾಗುವ 3 ಟೇಬಲ್ ಹಾಗೂ 12 ಕುರ್ಚಿಗಳನ್ನು ನೀಡಲಾಯಿತು.
ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಹಾಗೂ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಮುಂದಾಗಿರುವದು ಶಾಘ್ಲನೀಯ. ಸೇತುವೆಗೆ ಅಡಿಪಾಯ ಹಾಕಿದಂತಾಗಿದೆ. ಮುಂದೆಯೂ ಇಂಥ ಉತ್ತಮ ಕಾರ್ಯ ಮುಂದುವರಿಯಲಿ ಎಂದು ಶಿರಳಗಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ನಾಯ್ಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಂ.ಅಂಬಿಗ, ನಿವೃತ್ತ ಶಿಕ್ಷಕ ಉಮೇಶ ನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಮಡಿವಾಳ ಬಿಕ್ಕಳಸೆ, ಊರಿನ ಹಿರಿಯರಾದ ಈಶ್ವರ ನಾಯ್ಕ ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗೋಪಾಲ ರಾಮ ಮಡಿವಾಳ, ಉಪಾಧ್ಯಕ್ಷ ವೀರಭದ್ರ ಗೋವಿಂದ ನಾಯ್ಕ ಹಾಗೂ ಸರ್ವ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು, ಊರ ನಾಗರಿಕರು ಪಾಲ್ಗೊಂಡಿದ್ದರು.