ಕುಮಟಾ: ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಟ್ಟಂತೆ ಎಲ್ಲೋ ಕುಳಿತು ಮೃತರಾದ ಕುಟುಂಬಕ್ಕೆ ಪರಿಹಾರ ಘೋಷಿಸುವ ಸರಕಾರ ನಡೆ ನಿಜಕ್ಕೂ ಸರಿಯಲ್ಲ. ಮುಖ್ಯಮಂತ್ರಿಗಳು ಈ ಕೂಡಲೇ ನೆರೆ ಪ್ರದೇಶಕ್ಕೆ ಧಾವಿಸಬೇಕು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಕಿಡಿ ಕಾರಿದರು.
ಗುರುವಾರ ಸಂಜೆ ಕುಮಟಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಗದ್ದೆಗಳಲ್ಲಿ ಹೊಳೆಗಳಲ್ಲಿ ನೀರು ತುಂಬಿ, ನೂರಾರು ಗುಡ್ಡಗಳು ಕುಸಿದು ಸಾವಿರಾರು ಜನ ತಮ್ಮ ಜಮೀನನ್ನೂ, ಮನೆಯನ್ನು ಕಳೆದುಕೊಂಡಿದ್ದಾರೆ. ಬೇರೆ ಎಲ್ಲಾದರೂ ಈ ರೀತಿ ಆಗಿದ್ದರೆ ತಕ್ಷಣ ಮುಖ್ಯಮಂತ್ರಿ ಅಲ್ಲಿರುತ್ತಿದ್ದರು. ಹಿಂದೆ ಯಲ್ಲಾಪುರ ಕಳಚೆ ದುರಂತ ಆದಾಗ ತಕ್ಷಣ ನಮ್ಮ ಜಿಲ್ಲೆಗೆ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮಿಸಿದ್ದರು. ಆದರೆ ಕಾಂಗ್ರೆಸ್ ಸರಕಾರಕ್ಕೆ ಜನರ ವೋಟ್ ಮಾತ್ರ ಬೇಕು, ನಿಮಗೆ ಕನಿಕರ ಇದೆಯೇ? ಎಂದು ಪ್ರಶ್ನಿಸಿದರು.
ಮುಖ್ಯಂತ್ರಿಗಳಿಗೆ ನಮ್ಮ ಜಿಲ್ಲೆಯ ಬಗ್ಗೆ ಕೋಪ ಇದ್ದಂತಿದೆ. ನಾವು ನಿಮಗೆ ನಾಲ್ಕು ಜನ ಶಾಸಕರನ್ನು ನೀಡಿದ್ದೇವೆ. ನಿಮ್ಮ ಅಧಿಕಾರದಲ್ಲಿ ನಮ್ಮ ಜಿಲ್ಲೆಯ ಜನ ಹಾಕಿದ ಭಿಕ್ಷೆ ಇದೆ. ಆದರೂ ನೀವು ನಮ್ಮ ಜಿಲ್ಲೆಗೆ ಬರುತ್ತಿಲ್ಲ ಎಂದು ಆಕ್ಷೇಪಿಸಿದರು. ಚುನಾವಣೆಗೂ ಮೊದಲು ಶಾಸಕ ಸತೀಶ ಶೈಲ್ ಹಾಗೂ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಾವು ಟೋಲ್ ಬಂದ್ ಮಾಡುತ್ತೇವೆ, ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆಂದು ಕೂಗಾಡಿದಿರಿ, ಆದರೆ ಆಯ್ಕೆಯಾದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಅಪೂರ್ಣವಾಗಿದೆ ಎಂದು ಪ್ರಶ್ನಿಸಲೂ ಇಲ್ಲ. ಟೋಲ್ ಬಂದ್ ಗೆ ಆಗ್ರಹವನ್ನೂ ಮಾಡಿಲ್ಲ. ಹೀಗಾಗಿ ನಿಮ್ಮ ನಿರ್ಲಕ್ಷವೇ ಇಂಥ ಪರಿಸ್ಥಿತಿಗೆ ಕಾರಣ ಎಂದು ಅವರು ವಿವರಿಸಿದ್ದರು.
ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅನಂತಮೂರ್ತಿ ಹೆಗಡೆ, ತಕ್ಷಣ ಕ್ಷೇತ್ರಕ್ಕೆ ಬರಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಜನ ಕಷ್ಟಪಡುತ್ತಿದ್ದಾರೆ. ತಾವು ಅವರ ಜೊತೆಗಿದ್ದು ಅವರಿಗೆ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಉಸ್ತುವಾರಿ ಸಚಿವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ನಮ್ಮ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈಗಾಗಲೇ ಸ್ಥಳ ವೀಕ್ಷಣೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಶಾಸಕ ದಿನಕರ ಶೆಟ್ಟಿ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ತಕ್ಷಣ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೆಲಿಕಾಪ್ಟರ್ ಮುಖಾಂತರ ಉತ್ತರ ಕನ್ನಡ ಜಿಲ್ಲೆಗೆ ಬರಬೇಕು. ಅಲ್ಲೇ ಕುಳಿತು 5 ಲಕ್ಷ ಪರಿಹಾರ ಘೋಷಣೆ ಮಾಡಿದರೆ ಏನೂ ಪ್ರಯೋಜನ ಇಲ್ಲ, ಏನು ಜನರ ಜೀವಕ್ಕೆ ಬೆಲೆ ಕಟ್ಟುತ್ತಿದ್ದೀರಾ? ಎಂದು ಗುಡುಗಿದರು.
ಮಳೆಯಿಂದ ಸಾವಿರಾರು ಜನ ಮನೆ ಜಮೀನು ಕಳಿದುಕೊಂಡಿದ್ದಾರೆ ಇದನ್ನು ಸರಕಾರ ಗಮನಿಸಿ ತಕ್ಷಣ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಎಂದ ಅವರು, ನಿಮಗೆ ಉತ್ತರ ಕನ್ನಡ ಜಿಲ್ಲೆ ಜನರ ಜೀವ ಜೀವನದ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಬನ್ನಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಅಧ್ಯಕ್ಷ ಉಮೇಶ ಹರಿಕಾಂತ,ಅಳಕೋಡ ಪಂಚಾಯತ ಅಧ್ಯಕ್ಷ ದೇವು ಗೌಡ, ಗ್ರಾ.ಪಂ ಸದಸ್ಯ ವಿನಾಯಕ ನಾಯ್ಕ ಇದ್ದರು.