ಜನ ಸ್ಪಂದನಾ ಸಭೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಉಸ್ತುವಾರಿ ಸಚಿವ
ಹೊನ್ನಾವರ : ಸರಕಾರದಿಂದ ಸಾಧ್ಯವಾಗದೆ ಇದ್ದದ್ದನ್ನು ನಾನು ಮಾಡುತ್ತೇನೆ. ನನ್ನ ಕ್ಷೇತ್ರದ ಜನರಿಗೆ ಯಾವುದು ಸಾಧ್ಯವಿಲ್ಲ ಅನ್ನುವುದು ಇಲ್ಲ, ಎಲ್ಲವು ಆಗುತ್ತದೆ ಎಂದು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ಎಸ್. ವೈದ್ಯ ಹೇಳಿದರು.
ಅವರು ತಾಲೂಕಿನ ಮಾವಿನಕುರ್ವದ ನವದುರ್ಗ ಸಭಾಭವನದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಹೊನ್ನಾವರ ತಾಲೂಕಿನ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಜನರಲ್ಲಿ ನಮ್ಮ ಸರಕಾರ ಹೋಗಬೇಕು, ಶಾಸಕರು, ಸಚಿವರು, ಅಧಿಕಾರಿಗಳು ಸಾಮಾನ್ಯ ಜನರ ಬಳಿ ಹೋಗಬೇಕು, ಅವರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಈ ಸಭೆಯಲ್ಲಿ ಬಂದಿರುವ ನಿಮ್ಮ ಸಮಸ್ಯೆಯನ್ನು ಸರಕಾರದ ಘಮನಕ್ಕೆ ತಂದು ಕೆಲಸ ಮಾಡಿಕೊಡುತ್ತೇವೆ. ಸ್ಥಳೀಯ ಅಧಿಕಾರಿಗಳಲ್ಲಿ ಆಗುವ ಕೆಲಸವನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಅಧಿಕಾರಿಗಳು, ಜನಪ್ರತಿನಿದಿನಗಳು ಜೊತೆ ಇರಬೇಕು ಎನ್ನುವುದು, ನಿಮಗೆ ಸ್ಪಂದಿಸಿ ನಿಮ್ಮ ಮನೆಗೆ ಹೋಗಿ ಮಾಡಿಕೊಡಬೇಕು. ನನ್ನ ಜನ, ನನ್ನ ಕ್ಷೇತ್ರದ ಜೊತೆಗೆ ಇದ್ದೇನೆ. ಅಧಿಕಾರಿಗಳ ಜೊತೆಗೂ ಇದ್ದೇನೆ ಎಂದರು.
ಅಧಿಕಾರ ಇರಲಿ ಬಿಡಲಿ ನಿಮ್ಮ ಜೊತೆ ಇರ್ತೇನೆ. ಮಾವಿನಕುರ್ವ ಮುಖ್ಯ ರಸ್ತೆಗೆ 3 ಕೋಟಿ ಮಂಜೂರಿ ಆಗಿದೆ, ಮಳೆ ಮುಗಿದ ನಂತರ ಕೆಲಸ ಪ್ರಾರಂಭ ಆಗುತ್ತದೆ. ಈ ಊರು ನಂದೇ, ಇಲ್ಲಿಯ ಅಭಿವೃದ್ಧಿ ನನಗೆ ಮುಖ್ಯ, ರಾಜಕೀಯ ಮಾಡದೆ ಬಿಜೆಪಿ ಕಾಂಗ್ರೇಸ್ ಎನ್ನುವುದು ಬಿಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದರು.
ಭಟ್ಕಳ ಉಪವಿಭಾಧಿಕಾರಿ ಡಾ. ನಯನಾ ಮಾತನಾಡಿ ಸರಕಾರದ ಯೋಜನೆಯ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕು. ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ಜನರು, ಅಧಿಕಾರಿಗಳು, ಜನಪ್ರತಿನಿಧಿಗಳ ನಡುವಿನ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಜನ ಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಅದರ ಪ್ರಯೋಜನ ಪಡೆಯಿರಿ ಎಂದರು.
ಮಾವಿನಕುರ್ವ ಗ್ರಾ.ಪಂ. ಅಧ್ಯಕ್ಷ ಪೀಟರ್ ಮೆಂಡಿಸ್ ಮಾತನಾಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಕೆಲವು ರಸ್ತೆಗಳು ಕಾಂಕ್ರಿಟ್ ರಸ್ತೆ ಆಗಬೇಕಿದ್ದು ಅದಕ್ಕೆ ಅನುದಾನ ಒದಗಿಸಿ ಕೊಡಬೇಕಿದೆ. ಗ್ರಾ. ಪಂ. ವ್ಯಾಪ್ತಿಯ ಸಮಸ್ತ ಅಭಿವೃದ್ಧಿಗೆ ಸಚಿವರ ಸಹಕಾರ ಅಗತ್ಯವಿದೆ ಎಂದರು.
ವಿವಿಧ ಯೋಜನೆಯ ಪಲಾನುಭವಿಗಳಿಗೆ ಪಿಂಚಣಿಗೆ ಸಂಬಂಧ ಪಟ್ಟ 22 ಜನರಿಗೆ ಆದೇಶ ಪ್ರತಿ ವಿತರಣೆ ಮಾಡಿದರು. ವಿವಿಧ ಇಲಾಖೆ ಮತ್ತು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಷಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಯಶಸ್ವಿಯಾಗಿ ನಡೆಯಿತು.
ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆಯ ಅಹವಾಲುಗಳನ್ನು ಸಲ್ಲಿಸಿದರು. ಸಚಿವರು ಅಧಿಕಾರಿಗಳ ಮೂಲಕ ಕೆಲವು ಸಮಸ್ಯೆಗಳನ್ನು ತಕ್ಷಣ ಪರಿಹಾರ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಭಟ್ಕಳ ಡಿವೈಎಸ್‌ಪಿ ಮಹೇಶ್, ತಹಸೀಲ್ದಾರ್ ರವಿರಾಜ್ ದೀಕ್ಷಿತ್, ಉಪ ತಹಸೀಲ್ದಾರ್ ಉಷಾ ಪಾವಷ್ಕರ, ಗ್ರಾ. ಪಂ. ಅಧ್ಯಕ್ಷ ಪೀಟರ್ ಮೆಂಡಿಸ್, ಉಪಾಧ್ಯಕ್ಷೆ ಸವಿತಾ ನಾಯ್ಕ, ತಾ. ಪಂ. ಪ್ರಭಾವೆ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಂದ ಕೆ. ಇದ್ದರು.
ಲೋಕಾಯುಕ್ತ ದಾಳಿಗೆ ಪ್ರತಿಕ್ರಿಯಿಸಿ ಅಧಿಕಾರಿಗಳಿಗೆ ಬುದ್ದಿ ಮಾತು :
ಇತ್ತೀಚಿಗೆ ಪ. ಪಂ. ಅಧಿಕಾರಿ ಮೇಲೆ ನಡೆದ ಲೋಕಾಯುಕ್ತ ದಾಳಿ ಪ್ರಸ್ತಾಪಿಸಿ ಅಧಿಕಾರಿಗಳು ಹಾಳು ಮಾಡಿಕೊಳ್ಳಲು ಹೋಗಬೇಡಿ, ಸಮಸ್ಯೆ ಮಾಡಿಕೊಳ್ಳಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಬುದ್ದಿ ಮಾತು ಹೇಳಿದರು. ಆ ಅಧಿಕಾರಿ ಮೇಲೆ ದಾಳಿ ಆಗಿದ್ದು ಸರಿ ಇದೆ. ಅವರು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಕೊಟ್ಟವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ದಾದಾಗಿರಿ ಮಾಡಬೇಡಿ : ಕಡಿವಾಣ ಹಾಕುತ್ತೇನೆ
ದಾದಾಗಿರಿ ಮಾಡಿಯೇ ಬದುಕುತ್ತೇನೆ ಹೇಳಿದರೆ ಅದಕ್ಕೂ ಕಡಿವಾಣ ಹಾಕುತ್ತೇನೆ. ಎಲ್ಲರು ಒಟ್ಟಿಗೆ ಬದುಕಬೇಕು. ಒಳ್ಳೆ ಊರು ಆಗಬೇಕು. ಇದು ನಂದೆ ಊರು, ಒಟ್ಟಿಗೆ ಅಭಿವೃದ್ಧಿ ಮಾಡಿ ಬದುಕಬೇಕು. ಇಲ್ಲ ದಾದಾಗಿರಿ ಮಾಡಿಯೇ ತೀರುತ್ತೇವೆ ಎಂದರೆ ಕಡಿವಾಣ ಹಾಕುತ್ತೇನೆ ಎಂದರು.
ಸೇತುವೆ ತಂದಿದ್ದು ನಾನೇ, ದಾಖಲೆ ಇದೆ :
ಮಾವಿನಕುರ್ವ ಸೇತುವೆ ತಂದಿದ್ದು ನಾನೇ, ಅದಕ್ಕೆ ದಾಖಲೆ ನನ್ನ ಹತ್ತಿರ ಇದೆ. ಸರಕಾರದಿಂದ ಮಂಜೂರಿ ತರುವುದು ಮಾತ್ರ ನಮ್ಮ ಕೆಲಸ, ಅದರ ಹಣ ನಿಮ್ಮದೇ, ನೀವು ಕಟ್ಟಿರುವ ಟ್ಯಾಕ್ಸ್ ಹಣವನ್ನೇ ಇಲ್ಲಿ ಬಳಸುವುದು ಎಂದು, ಸೇತುವೆ ತಂದಿದ್ದು ಮಾತ್ರ ನಾನೇ ಎಂದು ಹೇಳಿದರು.
ಸೇತುವೆ ಉದ್ಘಾಟನೆಗೆ ವಿನಂತಿಸಿದ ಗ್ರಾ. ಪಂ. ಅಧ್ಯಕ್ಷ :
ವೇದಿಕೆ ಮೇಲಿದ್ದ ಗ್ರಾ. ಪಂ. ಅಧ್ಯಕ್ಷ ಪೀಟರ್ ಮೆಂಡಿಸ್ ಮಾವಿನಕುರ್ವ ಸೇತುವೆ ಉದ್ಘಾಟನೆಗೆ ಸಚಿವರನ್ನು ವಿನಂತಿ ಮಾಡಿಕೊಂಡರು. ಸಚಿವರು ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಮಾವಿನಖುರ್ವ ಸೇತುವೆ ಉದ್ಘಾಟನೆ ಮಾಡಿ ಎಂದು ವಿನಂತಿ ಮಾಡಿದರು.
ಜನರ ಅಹವಾಲು ಆಲಿಸಿದ ಸಚಿವ :
ಸಚಿವ ಮಂಕಾಳ್ ವೈದ್ಯ ಜನರ ಅಹವಾಲುಗಳನ್ನು ನಿದಾನವಾಗಿ ಆಲಿಸಿ ಸಂಬಂಧ ಪಟ್ಟ ಅಧಿಕಾರಿ ಕರೆದು ಅಲ್ಲಿಯೇ ಪರಿಹಾರ ಕೊಡಿಸಿದರು. ಇನ್ನೂ ಕೆಲವು ತಕ್ಷಣ ಮದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ, ಅರಣ್ಯ, ಕೃಷಿ, ಕಂದಾಯ, ಜಿ. ಪಂ., ಲೋಕೋಪಯೋಗಿ ಹೀಗೆ ವಿವಿಧ ಇಲಾಖೆಯ ಪ್ರಮುಖ ಸಮಸ್ಯೆಗಳನ್ನು ಹೊತ್ತು ಬಂದ ಸಾರ್ವಜನಿಕರು ಸಚಿವರ ಸ್ಪಂದನೆಗೆ ಖುಷಿಯಾಗಿ ಮನೆಗೆ ತೆರಳಿದರು.