Slide
Slide
Slide
previous arrow
next arrow

‘ಹಲಸು’ ತಾಯಿ‌ ಹಾಲಿಗೆ ಸಮ: ಡಾ.ಲಕ್ಷ್ಮೀನಾರಾಯಣ

300x250 AD

ಶಿರಸಿ: ಅತಿಹೆಚ್ಚು ಪೋಷಕಾಂಶಗಳಿರುವ ಹಲಸು ತಾಯಿ ಹಾಲಿಗೆ ಸಮಾನ ಎಂದರೆ ತಪ್ಪಾಗಲಾರದು. ನಮ್ಮ ಮನೆಯಲ್ಲಿರುವ ಹಲಸು ನಮ್ಮ ಬದುಕಿಗೆ ಕಲ್ಪವೃಕ್ಷವಿದ್ದಂತೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ. ಲಕ್ಷ್ಮೀನಾರಾಯಣ ಹೆಗಡೆ ಹೇಳಿದರು.

ಭಾನುವಾರ ಸಂಜೆ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ನಡೆದ ಮಲೆನಾಡು, ಹಲಸು ಮೇಳದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ಮಲೆನಾಡಿನ ಖಾದ್ಯಗಳೇ ವಿಶೇಷವಾಗಿದೆ. ಅವುಗಳದ್ದೇ ಒಂದು ಮೇಳ ಮಾಡಬಹುದು. ಉಪಯೋಗಕ್ಕೆ ಬಾರದೆಂದು ನಾವೇ ತೀರ್ಮಾನಿಸಿ ಹಲಸನ್ನು ಕಡಿಯಬೇಡಿ. ಹಲಸು ದೇಶದ ಆಸ್ತಿಯಾಗಿದೆ ಎಂದರು.
ಉತ್ತರ ಕನ್ನಡ ಎಲ್ಲ ವಿಷಯದಲ್ಲಿ ಬಂಗಾರದ ಗಣಿಯಾಗಿದೆ. ಸಾಕಷ್ಟು ಅವಕಾಶವಿದೆ. ನಮಗೆ ಬೇಕಿದ್ದನ್ನು ತೆಗೆದುಕೊಂಡು ಬದುಕನ್ನು ಬಂಗಾರವನ್ನಾಗಿಸಿಕೊಳ್ಳುವತ್ತ ನಾವು ಗಮನ ಹರಿಸಬೇಕಿದೆ.

ಯಾವುದೇ ಗೃಹೋದ್ಯಮ ಇರಲಿ. ಯಾವುದೂ ಸಣ್ಣದಲ್ಲ. ಪ್ರತಿಯೊಂದಕ್ಕೂ‌ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಜೊತೆಗೆ ನಮ್ಮ ಉದ್ಯಮಿಗಳ ಮನಸ್ಥಿತಿಯೂ ಬದಲಾಗಬೇಕು. ಉದ್ಯಮದಲ್ಲಿ ಕೆಲಸಗಾರರನ್ನು ಗೌರವದಿಂದ ಕಾಣುವ ಮನಸ್ಥಿತಿ ನಮ್ಮದಾಗಬೇಕು.ಆ ಮೂಲಕ ಕೆಲಸಗಾರರನ್ನು ಬೆಳೆಸುವ ಮೂಲಕ ನಮ್ಮ ಬೆಳವಣಿಗೆಯನ್ನು ಕಾಣಬಹುದು ಎಂದರು. ನಮ್ಮ ಉತ್ಪಾದನೆಗಳಿಗೆ ಬ್ರಾಂಡಿಂಗ್ ಸಹ ಮುಖ್ಯ. ಆ ನಿಟ್ಟಿನಲ್ಲಿಯೂ ನಾವು ಕೆಲಸ ಮಾಡಬೇಕಿದೆ. ನಮ್ಮಲ್ಲಿರ ಸಂಪನ್ಮೂಲಗಳನ್ನು ಹಾಳು ಮಾಡುವ ಸಂಸ್ಕೃತಿಯನ್ನು ಬಿಟ್ಟು, ಮತ್ತೊಬ್ಬರಿಗೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ, ಸಂಸ್ಥೆಯ ಆರಂಭದಲ್ಲಿ ಸಂಸ್ಥೆಗೆ ಕಷ್ಟವಾದರೂ ಸಹ ಜನರಿಗೆ ಗೃಹೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದೆರಡು ಗಟ್ಟಿ ನಿರ್ಣಯ ಕೈಗೊಂಡಿದ್ದೆವು. ಅದರ ಪರಿಣಾಮ ಇಂದು ಸಂಸ್ಥೆಯ ಜೊತೆಗೆ ಗೃಹೋದ್ಯಮಿಗಳು ಇದ್ದಾರೆ ಎಂದರು.

ಮಾರುಕಟ್ಟೆಯ ಜನರಿಗೆ ಅವಶ್ಯವಿರುವುದನ್ನು ನಾವು ಉತ್ಪಾದಿಸಿದಾಗ ಉದ್ಯಮದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಉದ್ಯಮದಲ್ಲಿ ಏರುಪೇರು ಸಹಜ. ತಾಳ್ಮೆಯಿದ್ದಾಗ ಮಾತ್ರ ಗೆಲುವು ದೊರಕುತ್ತದೆ. ಮಾರುಕಟ್ಟೆಯ ಕುರಿತಾಗಿ ಗೃಹೋದ್ಯಮಿಗಳಿಗೆ ತಲೆಬಿಸಿ ಬೇಡ. ಗುಣಮಟ್ಟದ ಉತ್ಪನ್ನವನ್ನು ಉತ್ಪಾದಿಸಿಕೊಟ್ಟಾಗ, ನಾವು ಮಾರುಕಟ್ಟೆಯನ್ನು ಮಾಡಿಕೊಡುತ್ತೇವೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಬ್ರ್ಯಾಂಡ್ ಆಗುವ ನಿಟ್ಟಿನಲ್ಲಿ ನಾವೆಲ್ಲ ಮುಂದಿನ ದಿನದಲ್ಲಿ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇದೆಯೆಂದರು.

ಸೆಲ್ಕೊ ಸೋಲಾರ್ ಫೌಂಡೇಶನ್ ಸಂಸ್ಥೆಯ ಪ್ರಕಾಶ ಮೇಟಿ ಮಾತನಾಡಿ, ಸುಸ್ಥಿರ ಇಂಧನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸೆಲ್ಕೋ ಸೋಲಾರ್ ಕೆಲಸ ಮಾಡುತ್ತಿದೆ. ಸ್ಥಳೀಯ ಸಂಪನ್ಮೂಲ ಬಳಕೆಯ ಮೂಲಕ ಹಲಸಿನ ಮೇಳದ ಯಶಸ್ಸನು ಕಾಣಬಹುದಾಗಿದೆ. ಹಲಸಿನ ಬೆಳೆ ಕೇವಲ ನಮ್ಮ ಮನೆಗೆ ಸೀಮಿತವಾಗಬಾರದು, ಬದಲಾಗಿ ಮಾರುಕಟ್ಟೆಗೆ ಅದರ ಉತ್ಪನ್ನಗಳು ಬರುವಂತಾಗಬೇಕು ಎಂದರು. ತಂತ್ರಜ್ಞಾನ ಬಳಸಿಕೊಂಡು ಉದ್ಯಮ ಪ್ರಾರಂಭಿಸಿದರೆ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸೆಲ್ಕೋ ಫೌಂಡೇಶನ್ ಗೃಹೋದ್ಯಮಿಗಳಿಗೆ ಅನುಕೂಲವಾಗುವಂತೆ ಸೋಲಾರ್ ಮೂಲಕ ತಂತ್ರಜ್ಞಾನ ಒದಗಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೆಲ್ಕೋ ಫೌಂಡೇಶನ್ ಚಂದ್ರಶೇಖರ ಮಾತನಾಡಿ, ಸೌರಚಾಲಿತ ಯಂತ್ರೋಪಕರಣ ನಿಟ್ಟಿನಲ್ಲಿ ಯಾವುದೇ ಉದ್ಯಮಕ್ಕೆ ಸೆಲ್ಕೋ ಸೋಲಾರ್ ನಿಮಗೆ ಬೆಂಬಲವಾಗಿ ನಿಲ್ಲಲಿದೆ ಎಂದರು.

ಇದೇ ವೇಳೆ ವನಸ್ತ್ರೀ ಸಂಸ್ಥೆಯ ಸಾಂಪ್ರದಾಯಿಕ ಬೀಜ ಸಂರಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಭಾನುಮತಿ ಕಳೆದ 23 ವರ್ಷಗಳಿಂದ ಮಲೆನಾಡು ಮೇಳವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಸ್ಥೆಯ ಸದಸ್ಯರ ಅವತ್ತಿನ ಉಮೇಧುವಾರಿಕೆಯೇ ಇಂದಿಗೂ ಸಹ ಮುಂದುವರೆಯುತ್ತಿರುವುದು ಸಂತಸದ ಸಂಗತಿ ಎಂದರು. ಇದೇ ವೇಳೆ ಸಂಸ್ಥೆಯ ವಸುಮತಿ, ವಿನೋದಾ, ಸುಕನ್ಯಾ ಕೂಗಲಕುಳಿಯವರನ್ನು ಸನ್ಮಾನಿಸಲಾಯಿತು.

ಹಲಸಿನ ಬೀಜದ ಖಾದ್ಯ ಸ್ಪರ್ಧೆಯ ಸಿಹಿ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಯನಾ ಹೆಗಡೆ ಉಮ್ಮಚಗಿ, ದ್ವಿತೀಯ ಬಹುಮಾನ ಸವಿತಾ ಹೆಗಡೆ, ತೃತೀಯ ಸ್ಥಾನದಲ್ಲಿ ಸಂಧ್ಯಾ ಹೆಗಡೆ ಕೊರ್ಸೆ ಪಡೆದರು. ಖಾರಾ ತಿಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕವಿತಾ ಭಟ್ಟ, ದ್ವಿತೀಯ ಸ್ಥಾನ ರೇಣುಕಾ ಭಟ್ಟ, ಬ್ಯಾಗದ್ದೆ, ತೃತೀಯ ಸ್ಥಾನ ವಿಜಯಾ ಭಟ್ಟ ಪಡೆದುಕೊಂಡರು.

300x250 AD

ವೇದಿಕೆಯಲ್ಲಿ ವನಸ್ತ್ರೀ ಸಂಸ್ಥೆಯ ನಿರ್ದೇಶಕಿ ಶೈಲಜಾ ಗೋರ್ನಮನೆ, ಶ್ಯಾಮಲಾ ಇದ್ದರು. ಉತ್ತರ ಕನ್ನಡ ಸಾವಯವ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎನ್. ವಿಕಾಸ್ ನಿರ್ವಹಿಸಿ, ವಂದಿಸಿದರು.


ಉತ್ತರ ಕನ್ನಡ ಜಿಲ್ಲೆಯ ಜನ ಎಲ್ಲವನ್ನೂ ಇಟ್ಟುಕೊಂಡು, ಯಾವುದನ್ನೂ ಸರಿಯಾಗಿ ಬಳಸಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಉತ್ತರ ಕಾಣದ ಕನ್ನಡವೇ ಉತ್ತರ ಕನ್ನಡ ಜಿಲ್ಲೆಯಾಗಿದೆ. – ಡಾ. ಲಕ್ಷ್ಮೀನಾರಾಯಣ ಹೆಗಡೆ, ವಿಸ್ತರಣಾಧಿಕಾರಿ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ


ಮಳೆರಾಯನ ಮಧ್ಯದಲ್ಲಿಯೂ ಜನಮೆಚ್ಚುಗೆ ಗಳಿಸಿದ ಹಲಸಿನ ಕ್ಯಾಂಟೀನ್:

ಎರಡು ದಿನದ ಮಲೆನಾಡು, ಹಲಸು ಮೇಳದ ವಿಶೇಷ ಆಕರ್ಷಣೆಯಾಗಿದ್ದ ಹಲಸಿನ ಕ್ಯಾಂಟೀನ್ ಮೇಳಕ್ಕೆ ಆಗಮಿಸಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಹಲಸಿನ ಚಿಪ್ಸ್, ಚಕ್ಕುಲಿ, ಹಣ್ಣಿನ ಶಿರಾ, ಕಡುಬು, ದೋಸೆ ಮೇಳದ ವಿಶೇಷ ಆಕರ್ಷಣೆಯಾಗಿ ಕಂಡುಬಂದಿತು.

ಗೃಹೋದ್ಯಮದ ಬೆನ್ನೆಲುಬಾದ ಸೆಲ್ಕೋ ಸೌರಚಾಲಿತ ಯಂತ್ರ:
ಜಿಲೆಯ ಅನೇಕ ಗೃಹೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೌರಚಾಲಿತ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಇದರ ಪ್ರಾತ್ಯಕ್ಷಿಕೆ ಸಹ ಮೇಳದಲ್ಲಿ ನಡೆದಿದ್ದು, ಅನೇಕ ಗೃಹೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಂಡರು.

: ಗಮನ ಸೆಳೆದ ವಿಚಾರ ಸಂಕಿರಣ; ತಂಬುಳಿಮನೆ ಕಾರ್ತೀಕ್ ಶ್ರೀಧರ ಭಾಗಿ

ಮೇಳದಲ್ಲಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಸಾಗರ ಮೂಲದ ಬೆಂಗಳೂರಿನ ಉದ್ಯಮಿ ತಂಬುಳಿಮನೆಯ ಸಹ ಸಂಸ್ಥಾಪಕ ಕಾರ್ತೀಕ ಶ್ರೀಧರ, ಮಾತನಾಡಿ ಏನೋ ಮಾಡಬೇಕು ಎಂಬ ಗುಂಗಿನಲ್ಲಿ ಆರಂಭವಾಗಿದ್ದು ತಂಬುಳಿಮನೆ. ಪ್ರಸ್ತುತ ಬೆಂಗಳೂರಿನಲ್ಲಿ ಮೂರು ಶಾಖೆಗಳಲ್ಲಿ ಕೆಲಸ ಮಾಡುತ್ತಿದೆ. ಈ ವರೆಗೆ 46 ವಿವಿಧ ರೀತಿಯ ತಂಬುಳಿಯ ಬಗೆ ಪರಿಚಯಿಸಲಾಗಿದೆ ಎಂದರು.

ಯಾವುದೇ ಉದ್ಯಮ ಇರಲಿ. ಕೇವಲ ಪ್ರಾತ್ಯಕ್ಷಿಕೆಗೆ ಮಾತ್ರ ನಮ್ಮ ಅನ್ವೇಷಣೆಗಳು ಸೀಮಿತವಾಗಬಾರದು.ಎಲ್ಲರಿಗೂ ಪುರುಸೊತ್ತಿಲ್ಲ ಎಂಬ ಶಬ್ಧ ಸರ್ವೇ ಸಾಮಾನ್ಯ. ಆದರೆ ಯಾವ ಉದ್ಯಮವೂ ಬದ್ಧತೆ ಇಲ್ಲದಿದ್ದರೆ ಮುಂದುವರೆಯುವುದಿಲ್ಲ. ಸೋಲು-ಗೆಲುವು ಎರಡನೇ ಆದ್ಯತೆ. ಎಲ್ಲದಕ್ಕಿಂತ ಹೆಚ್ಚು ಪ್ರಯತ್ನ ಮಾಡುವ ಮನಸ್ಥಿತಿ ನಮ್ಮದಾಗಬೇಕು.

ಇಂದಿನ ಆಹಾರ ಪದ್ಧತಿಯ ಕಾರಣಕ್ಕೆ ನಮ್ಮ ಸಮಾಜದ ಆರೋಗ್ಯ ಕ್ಷೀಣಿಸುತ್ತಿದೆ. ಕೆಲ ಮೈಕ್ರೋ ಪ್ರೋಟೀನ್ ಗಳ ಮೂಲಕ ವೈದ್ಯಕೀಯ ಚಿಕಿತ್ಸೆಯೂ ಸಹ ನಮ್ಮ ದೇಹಕ್ಕೆ ತಂಬುಳಿಯಲ್ಲಿ ಸಿಗುತ್ತದೆ. ನಮ್ಮ ಕಂಪನಿ ವತಿಯಿಂದ ಆಸಕ್ತರಿಗೆ ಸೊಪ್ಪು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಉದ್ಯಮಿಗಳಿಗೆ ಹೊಸ ಉದ್ಯಮಗಳ ಮಾರಾಟ, ಲೈಸೆನ್ಸ್, ಬ್ರ್ಯಾಂಡ್ ಬಿಲ್ಡಿಂಗ್ ಕುರಿತು ತಿಳುವಳಿಕೆ ನೀಡುವಂತಾಗಬೇಕು ಎಂದರು.

Share This
300x250 AD
300x250 AD
300x250 AD
Back to top