ಯಲ್ಲಾಪುರ: ಮಹಾತ್ಮಗಾಂಧಿ ನರೇಗಾದಡಿ ತಾಲ್ಲೂಕಿನಾದ್ಯಂತ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ಕುರಿತ ಸಾರ್ವಜನಿಕ ಪ್ರಕರಣಗಳ ವಿಲೇವಾರಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಿಂದ ನಿಗದಿಪಡಿಸಲಾದ ಸಮಯಕ್ಕೆ ಸರಿಯಾಗಿ ಸೋಷಿಯಲ್ ಆಡಿಟ್ ಸಭೆ(ಅಡಹಾಕ್) ನಡೆಸಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಬಗೆಹರಿಯಬಹುದಾದ ಪ್ರಕರಣಗಳ ಇತ್ಯರ್ಥಕ್ಕೆ ಆಧ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ನ ಒಂಬಡ್ಸಮನ್ ಸಿ.ಟಿ. ನಾಯ್ಕ ಹೇಳಿದರು.
ಅವರು ಬುಧವಾರ ಯಲ್ಲಾಪುರದ ತಾಲ್ಲೂಕು ಪಂಚಾಯತ್ನ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಾಮಾಜಿಕ ಲೆಕ್ಕ ಪರಿಶೋಧಕರು, ತಾಂತ್ರಿಕ ಸಂಯೋಜಕರು, ಸಹಾಯಕರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ನರೇಗಾ ನಿಯಮಾನುಸಾರ ಅನುಷ್ಠಾನ ಮಾಡಬೇಕು. ನಿಗದಿತ ಕಾಮಗಾರಿ ಪಟ್ಟಿಯಲ್ಲಿರದ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು. ಯಂತ್ರೋಪಕರಣ ಬಳಸಿ ಕಾಮಗಾರಿ ಅನುಷ್ಠಾನ ಮಾಡಬಾರದು. ಕೂಲಿಕಾರರು ಕೆಲಸ ಮಾಡದೇ ಕೂಲಿ ಪಾವತಿಸಲು ಕ್ರಮ ಕೈಗೊಳ್ಳಬಾರದು. ಈ ಕುರಿತ ಕಾನೂನನ್ನು ಸರಿಯಾಗಿ ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಕಾಮಗಾರಿ ಪ್ರಗತಿ ಹಂತದಲ್ಲಿಯೇ ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಸಾಮಾಜಿಕ ಲೆಕ್ಕ ಪರಿಶೋಧಕರು, ತಾಂತ್ರಿಕ ಸಂಯೋಜಕರು, ಸಹಾಯಕರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸರಿಪಡಿಸಿಕೊಳ್ಳಬೇಕು ಎಂದರು.
ಕಡತಗಳಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ವಹಿವಾಟುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾಮಗಾರಿಗಳ ಗುಣಮಟ್ಟದ ಕುರಿತು ಪರಿಶೀಲಿಸಿ, ಉತ್ತಮ ಆಡಳಿತ ನಿರ್ವಹಣೆ ಮಾಡುವಂತೆ ಸೂಚಿಸಿದರು.
ತಾಲ್ಲೂಕಿನ ಚಂದಗುಳಿ, ಕುಂದರಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನರೇಗಾದಡಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ಕಡತಗಳ ನಿರ್ವಹಣೆ ಹಾಗೂ ಕಾಮಗಾರಿ ಸ್ಥಳಕ್ಕೆ ತೆರಳಿ ಕಾಮಗಾರಿಗಳ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿ ಪಿಡಿಒ, ಟಿಸಿ, ಟಿಎಇ, ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಎನ್.ಆರ್. ಹೆಗಡೆ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ ಸೇರಿದಂತೆ ತಾಪಂ ಅಧಿಕಾರಿಗಳು, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಸಾಮಾಜಿಕ ಲೆಕ್ಕ ಪರಿಶೋಧಕರು, ಎಂಐಎಸ್, ಐಇಸಿ ಹಾಗೂ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಡಿಇಒ, ಸಿಬ್ಬಂದಿ ಉಪಸ್ಥಿತರಿದ್ದರು.