ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು 2ನೇ ದಿನವಾದ ಬುಧವಾರದಂದು ಸಂಪ್ರದಾಯದ ಕೆಂಡಸೇವೆ ಹರಕೆಯನ್ನು ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.
ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಅಮ್ಮನವರ ಭಟ್ಕಳದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ದೇವರನ್ನು ನಂಬಿದ ಭಕ್ತರು ಕಷ್ಟಕಾಲದಲ್ಲಿ ಹೇಳಿಕೊಂಡಿದ್ದ ಸಂಪ್ರದಾಯದ ಕೆಂಡಸೇವೆಯ ಹರಕೆಯನ್ನು ಸಹಸ್ರಾರಕ್ಕೂ ಅಧಿಕ ಭಕ್ತರು ದೇವಿಯ ಎದುರಿನ ಆವರಣದಲ್ಲಿ ಸಲ್ಲಿಸಿದರು. ಬೆಳಿಗ್ಗೆ ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸಿದ್ದಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚನವೇ ಸರಿ. ಈ ಸಂದರ್ಭದಲ್ಲಿ ಭಕ್ತರಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಲ್ಲಿಸುವ ಹರಕೆಗಳಲ್ಲಿ ಸಂಪ್ರದಾಯದ ಕೆಂಡಸೇವೆ ಪ್ರಮುಖವಾದದ್ದು ತಮ್ಮ ಕಷ್ಟ ಪರಿಹಾರವಾದಲ್ಲಿ ದೇವಿಗೆ ಕೆಂಡಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದ ಭಕ್ತರು ಕೆಂಡದ ಮೇಲೆ ನಡೆಯುವ ಮೂಲಕ ಹರಕೆಯನ್ನು ಶ್ರದ್ದಾಭಕ್ತಿಯಿಂದ ಸಲ್ಲಿಸಿದರು.
ವಿಶೇಷ ಕೆಂಡ ಸೇವೆ ಹರಕೆ: ಈ ಕೆಂಡಸೇವೆಯ ವಿಶೇಷವೆಂದರೆ ಭಕ್ತರ ಎಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸುವದಾಗಿದ್ದು, ಹರಕೆ ಹೊತ್ತ ಭಕ್ತರ ಅವರ ಸಮಸ್ಯೆ ಪರಿಹಾರವಾದ ನಂತರ ಈ ಜಾತ್ರೆಯ ಕೆಂಡ ಸೇವೆಯನ್ನು ಮಾಡಲಿದ್ದು ಮುಂದಿನ ದಿನದಲ್ಲಿ ಕುಟುಂಬಕ್ಕಾಗಲಿ ವೈಯಕ್ತಿಕವಾಗಲಿ ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ. ಪ್ರೇತಭಾದೆ, ಸಂತಾನ ಭಾಗ್ಯ, ಉದ್ಯೋಗ, ಕುಟುಂಬಗಳಲ್ಲಿನ ಸಮಸ್ಯೆ, ಕಳ್ಳತನ, ರೋಗ ರುಜನಿಗಳ ಪರಿಹಾರವೂ ಇಲ್ಲಿಗೆ ಈಗಾಗಲೇ ಹರಕೆ ಹೊತ್ತು ಪರಿಹಾರ ಸಿಕ್ಕಿ ಹರಕೆ ಸಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ. ಹಾಗೂ ದಿನದಿಂದ ದಿನಕ್ಕೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಶಕ್ತಿ ರಾಜ್ಯದ ಮೂಲೆ ಮೂಲೆಯ ಭಕ್ತರನ್ನು ಆಕರ್ಷಿಸುತ್ತಿದ್ದು, ಜಾತ್ರೆಯ ವೇಳೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಸಿಗುತ್ತಿದೆ. ಇನ್ನು ಭಟ್ಕಳದಲ್ಲಿ ಸೇವೆ ಸಲ್ಲಿಸಿದ ಇಲಾಖೆಯ ಕೆಲ ಅಧಿಕಾರಿಗಳು ಸಹ ಅವರ ಮನಸ್ಸಿನ ಇಷ್ಟಾರ್ಥಕ್ಕೆ ಕೆಂಡ ಸೇವೆ ಮಾಡಿರುವುದುಂಟು. ಈ ವರ್ಷದ ಮಹಿಳೆಯರು, ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ದೇವಿಯ ಹರಕೆಯನ್ನು ಕೆಂಡಸೇವೆಯ ಮೂಲಕ ಸಲ್ಲಿಸಿದರು. ಜಾತ್ರಾ ಪ್ರಾರಂಭವಾಗಿ ಎರಡು ದಿನಗಳಾಗಿದ್ದು, ಈಗಲೇ ದೇವಿಯ ದರ್ಶನಕ್ಕೆ ಕಿಕ್ಕಿರಿದು ಸೇರುತ್ತಿರುವ ಭಕ್ತರ ಸಂಖ್ಯೆ ದೇವಿಯ ಮಹಾತ್ಮೆಯನ್ನು ತಿಳಿಸುತ್ತದೆ. ಸೋಡಿಗದ್ದೆ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರ ಜತೆಗೆ ಸ್ಥಳೀಯವಾಗಿ ಜಾತ್ರೆಗೆ ತೆರಳುವ ಭಕ್ತರಿಂದ ಸಂಜೆಯಾದೊಡನೆ ಸೋಡಿಗದ್ದೆಯಲ್ಲಿ ಸಾವಿರಕ್ಕೂ ಅಧಿಕ ಜನರು ದೇವಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲಾ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ಮಜ್ಜಿಗೆ, ಪಾನಕವನ್ನು ವಿತರಿಸಿದ್ದಾರೆ.
ಒಟ್ಟಾರೆ ಬಿಸಿ ಬಿಸಿ ಬೆಂಕಿಯ ಕೆಂಡಗಳನ್ನು ಹಾದು ದೇವಿಗೆ ಸೇವೆ ಸಲ್ಲಿಸುವುದರ ಮೂಲಕ ಹರಕೆಯನ್ನು ಭಕ್ತರು ತೀರಿಸುತ್ತಿದ್ದರೆ ಇನ್ನೊಂದು ಕಡೆ ಕೆಂಡ ಸೇವೆಯಲ್ಲಿ ಭಾಗಿಯಾಗುವ ಎಲ್ಲರನ್ನು ದೇವಿ ರಕ್ಷಿಸುತ್ತಾಳೆಂಬ ನಂಬಿಕೆ ಸದಾ ಇಲ್ಲಿನ ಭಕ್ತ ವೃಂದದಲ್ಲಿ ದೃಢವಾಗಿದೆ