ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ ನೌಕರರ ಸಂಘದ ಉತ್ತರ ಕನ್ನಡ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ನೀರುಗಂಟಿ, ಸ್ವಚ್ಛತಾಗಾರರು ಇತ್ಯಾದಿ ನೌಕರರು ಗ್ರಾಪಂಗಳು ಆರಂಭವಾದ ಕಾಲದಿಂದಲೂ ಕನಿಷ್ಟ ಕೂಲಿ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲದೆ ತಮ್ಮ ಜೀವಮಾನವೇ ದುಡಿದು ನಿವೃತ್ತಿಯಾದಾಗ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಬಹಳ ದುಸ್ತರವಾಗಿರುವುದರಿಂದ ಸರಕಾರವೇ ಪಿಂಚಣಿ ನೀಡಲು ಒಂದು ಆಯೋಗ ರಚನೆ ಮಾಡಿತ್ತು. ಆ ಸಮಿತಿಯು ವರದಿಯನ್ನು ಇಲಾಖೆಗೆ ನೀಡಿದೆ. ಆ ವರದಿ ಮೇಲೆ ಸಂಘದ ಜೊತೆ ಚರ್ಚೆ ನಡೆದಿದ್ದರು ಸಹ ಜಾರಿಯಾಗಿಲ್ಲ. ತಕ್ಷಣ ಪಿಂಚಣಿ ಜಾರಿ ಮಾಡಬೇಕೆಂದು ಆಗ್ರಹಿಸಿದರು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಬೇಕು, ಖಾತರಿಪಡಿಸಬೇಕು. ರಸಗೊಬ್ಬರ ಒಳಗೊಂಡಂತೆ ಕೃಷಿ ಹಿಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡುವುದು. ರೈಲ್ವೆ, ವಿದ್ಯುತ್ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಎಲ್ಲಾ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ರೂ. 31,000 ಹಾಗೂ ಕನಿಷ್ಠ ಪಿಂಚಣಿ 6000 ನಿಗದಿ ಮಾಡಬೇಕು. ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.