ಯಲ್ಲಾಪುರ: ಕಸ್ತೂರಿ ರಂಗನ್ ವರದಿ ಉತ್ತರ ಕನ್ನಡಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗ್ರಹಿಸಿ, ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಲು, ಫೇಬ್ರವರಿ 2ನೇ ವಾರದಂದು ಡೆಲ್ಲಿ ಚಲೋ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಯಲ್ಲಾಪುರ ತಾಲೂಕಿನ ವೆಂಕಟ್ರಮಣ ದೇವಾಲಯದ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಗಳ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಅವರು ಹೇಳಿದರು. ಪಶ್ಚಿಮ ಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ ಸುಮಾರು 59940ಚ.ಕೀ.ಮೀ ಪ್ರದೇಶವನ್ನ ಡಾ. ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಕರ್ನಾಟಕದಲ್ಲಿ 20668ಚ.ಕೀ.ಮೀ ಪ್ರದೇಶವು 1597ಹಳ್ಳಿಗಳಿಗೆ ವಿಸ್ತರಿಸಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ 604 ಹಳ್ಳಿಗಳು ಸೇರ್ಪಡೆಗೊಂಡಿದೆ ಎಂದು ಅವರು ವರದಿಯ ಕುರಿತು ವಿಶ್ಲೇಷಿಸುತ್ತಾ ಹೇಳಿದರು.
ಜಿಪಿಎಸ್- ರಾಜ್ಯ ಸರಕಾರಕ್ಕೆ ಆಗ್ರಹ: ಅಸಮರ್ಪಕ ಜಿಪಿಎಸ್ ಗೆ ಮೇಲ್ಮನವಿ ಸಲ್ಲಿಸಿದ ಅರಣ್ಯವಾಸಿಗಳ ಮೇಲ್ಮನವಿಯನ್ನ ಪುರಸ್ಕರಿಸಿ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅರ್ಜಿಗೆ ಕ್ರಮ ಜರುಗಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ರಾಜ್ಯ ಸರಕಾರಕ್ಕೆ ರವೀಂದ್ರ ನಾಯ್ಕ ಆಗ್ರಹಿಸಿದರು. ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಸೀತಾರಾಮ ನಾಯ್ಕ, ನಾಗರಾಜ ಮರಾಠಿ, ಭಾಸ್ಕರ ಗೌಡ, ರಾಜ ಸಿದ್ಧಿ, ರಾಮ ಕುಣಬಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗಣಪತಿ ಕುಣಬಿ, ಕೇಶವ ಮಲೆನಳ್ಳಿ, ಎಸ್.ಎನ್.ಹೆಗಡೆ, ಹಬಿಬ್ ಸಾಬ್ ಕಿರವತ್ತಿ, ಥಾಮಸ್ ಮದ್ನೂರು, ರಾಮಾ ಸಿದ್ಧಿ ಉಚಗೇರಿ, ಪರಮೆಶ್ವರ ಬಾರೇ ಮುಂತಾದವರು ಉಪಸ್ಥಿತರಿದ್ದರು. ಅನಂತ ಗೌಡ ಸ್ವಾಗತಿಸಿದರು, ಅಣ್ಣಪ್ಪ ಕಣ್ಣಿಗೇರಿ ವಂದನಾರ್ಪಣೆ ಮಾಡಿದರು.
ಒಂದು ಲಕ್ಷ ಕುಟುಂಬದಿಂದ ಆಕ್ಷೇಪ: ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾದ್ಯಂತ ಒಂದು ಲಕ್ಷ ಕುಟುಂಬದಿಂದ ಆಕ್ಷೇಪಣಾ ಪತ್ರ ಸಲ್ಲಿಸುವ ಪ್ರಕ್ರೀಯೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಈ ಸಂದರ್ಭದಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.