ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ
ಶನಿವಾರ ನಡೆದ ರೈತಮುಖಂಡರು ಹಾಗೂ ರೈತರನ್ನೊಳಗೊಂಡ ಸಭೆಯಲ್ಲಿ ರೈತರ ತೋಟಗಳಿಗೆ ಕಾಡುಪ್ರಾಣಿಗಳ ಹಾವಳಿ, ವಿದ್ಯುತ್ ಕಡಿತ, ಕುಮಟಾ ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡುವ ಅಡಿಕೆಯ ಅಸಮರ್ಪಕ ತೂಕ ಸೇರಿದಂತೆ ರೈತರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರಚನಾತ್ಮಕವಾಗಿ ಹೋರಾಟ ನಡೆಸಲು ನಿರ್ಣಯಿಸಲಾಗಿದೆ.
ಕುಮಟಾದ ಎಪಿಎಂಸಿಯಲ್ಲಿ ಅಡಿಕೆ ತೂಕದಲ್ಲಿ ಮಾಡುವ ಅನ್ಯಾಯವನ್ನು ಸರಿಪಡಿಸಲು ಎಸಿ, ತಹಸೀಲ್ದಾರರ ನೇತೃತ್ವದಲ್ಲಿ ಮನವಿ ಸಲ್ಲಿಸಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ತಪ್ಪಿಸುವ ನಿಟ್ಟಿನಲ್ಲಿ ಸಚಿವರನ್ನು, ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಭೇಟಿಮಾಡಿ ಪರಿಹಾರೋಪಾಯಗಳ ಕುರಿತು ಮನವಿ ಮಾಡಿಕೊಳ್ಳಲು ಸಭೆ ನಿರ್ಣಯ ಕೈಗೊಂಡಿತು.
ತೋಟಗಳಿಗೆ ಮಂಗ, ಹಂದಿ ಮತ್ತಿತರ ಕಾಡುಪ್ರಾಣ ಗಳ ಹತೋಟಿಗೆ ಕ್ರಮ ಕೈಗೊಳ್ಳಲು ಹಾಗೂ ಪರಿಹಾರವನ್ನು ಸಮರ್ಪಕವಾಗಿ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಆಗ್ರಹಿಸಲು ಸಭೆ ನಿರ್ಣಯಿಸಿತು.
ಕಾರ್ಯಕ್ರಮ ಸಂಘಟಿಸಿದ ಜಿ.ಪಂ. ಮಾಜಿ ಸದಸ್ಯ ಪಿ.ಎಸ್.ಭಟ್ ಉಪ್ಪೋಣ ಮಾತನಾಡಿ ಕುಮಟಾದ ಎಪಿಎಂಸಿಯಲ್ಲಿ ಬರುವ ದಲಾಲರು, ರೈತರು ಮಾರಾಟ ಮಾಡುವ ಅಡಿಕೆಗೆ ಮುಂಗಾಲು ಎಂದು ಪ್ರತಿ ಕ್ವಿಂಟಾಲ್‌ಗೆ ಇನ್ನೂರು ಗ್ರಾಂ ಕಡಿತಗೊಳಿಸುತ್ತಾರೆ. ಇದಲ್ಲದೇ ನೂರು-ಇನ್ನೂರು ಗ್ರಾಂ. ಗಳಲ್ಲಿ ಬರುವ ಅಡಿಕೆಯನ್ನು ತೂಕ ಮಾಡದೇ ಲೆಕ್ಕಕ್ಕೆ ಪರಿಗಣಿಸುವುದಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.
ಕಾಡು ಪ್ರಾಣಿಗಳ ಹತೋಟಿಗೆ ಅರಣ್ಯ ಇಲಾಖೆಯವರು ರೈತರಿಗೆ ಸೌಂಡ್ ಸಿಸ್ಟಮ್ ಒದಗಿಸಬೇಕು. ಮಂಗಗಳನ್ನು ಹೆದರಿಸಿ ಓಡಿಸಲು ಅರಣ್ಯ ಇಲಾಖೆ ವತಿಯಿಂದ ಕೋವಿಯನ್ನು ಹಿಡಿದುಕೊಂಡು ಓಡಾಡುವ ಸಿಬ್ಬಂದಿಗಳನ್ನು ನೇಮಿಸಬೇಕು. ಈ ಹಿಂದೆ ಗ್ರಾ.ಪಂ.ಗಳಲ್ಲೂ ಇಂಥ ಸಿಬ್ಬಂದಿಗಳಿರುತ್ತಿದ್ದರು. ಅಂಥಹ ಸಿಬ್ಬಂದಿಗಳನ್ನು ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಹೊನ್ನಾವರ, ಕುಮಟಾ, ಭಟ್ಕಳ ತಾಲೂಕುಗಳಿಗೆ ಶಿರಸಿಯಿಂದ ವಿದ್ಯುತ್ ಪೂರೈಕೆಯಾಗುತ್ತದೆ. ಇದರಿಂದ ವಿದ್ಯುತ್ ಲೋಡ್ ಹೆಚ್ಚಾಗಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತದೆ. ಗೇರುಸೊಪ್ಪಾದಲ್ಲಿ 220ಕೆ.ವಿ. ವಿದ್ಯುತ್ ಸ್ಥಾಪಿಸಿ 110ಕೆ.ವಿ.ಗೆ ಇಳಿಸಿ 33ಕೆ.ವಿ. ವಿದ್ಯುತ್ ಸರಬರಾಜು ಮಾಡಿದರೆ ವಿದ್ಯುತ್ ಕಡಿತ ತಪ್ಪಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್ ಮಾತನಾಡಿ ರೈತರು ಹಲವಾರು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಆಗಾಗ ಸಭೆ ಸೇರಿ ಚರ್ಚಿಸಿ ಪರಹಾರ ಕ್ರಮಗಳಿಗೆ ಆಗ್ರಹಿಸೋಣ ಎಂದರು.
ಚಂದ್ರಕಾಂತ ಕೊಚರೇಕರ ಮಾತನಾಡಿ, ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ. ಹೆರಂಗಡಿ ಜನವಸತಿ ಇರುವ ಗ್ರಾಮವನ್ನೂ ಪರಿಸರಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ್ದಾರೆ. ಕಸ್ತೂರಿರಂಗನ್ ವರದಿ ರೈತರಿಗೆ ಮುಳುವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡ ಹೊಸಾಕುಳಿ ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ ಮಾತನಾಡಿ ಕಾಡುಪ್ರಾಣ ಹಾವಳಿ ನಿಯಂತ್ರಣ ಸೇರಿದಂತೆ ರೈತರ ಸಮಸ್ಯೆಗಳಿಗೆ ನ್ಯಾಯಾಂಗದ ಮೊರೆಹೋಗಬೇಕು. ರೈತರ ಮಕ್ಕಳೇ ಹೈಕೋರ್ಟಿನಲ್ಲಿ ಉತ್ತಮವಾದ ವಕೀಲರಿದ್ದಾರೆ. ಅಂತಹ ಐವರು ವಕೀಲರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿ ಹೈಕೋರ್ಟಿನಿಂದ ಆದೇಶ ಪಡೆಯಬೇಕು. ಅದು ಮುಂದಿನ ಪೀಳಿಗೆಗೂ ಅನುಕೂಲವಾಗುತ್ತದೆ ಎಂದರು.
ಹೊಸಾಕುಳಿ ವಿ.ಎಸ್.ಎಸ್.ಮಾಜಿ ಅಧ್ಯಕ್ಷ ಎಂ.ಆರ್.ಹೆಗಡೆ ಮಾತನಾಡಿ, ಪ್ರಾಣ ಕಾಟದ ನಿಯಂತ್ರಣದ ಕುರಿತು ಕೋರ್ಟ್ ಮೊರೆಹೋಗಬೇಕು ಎಂದರು. ಯೋಗೇಶ ರಾಯ್ಕರ ಮಾತನಾಡಿ ಬೆಳೆನಷ್ಟದ ಮಾನದಂಡಗಳ ಕುರಿತು ಪುನರ್ ಪರಿಶೀಲನೆಗೆ ಆಗ್ರಹಿಸಬೇಕು ಎಂದರು. ಭಟ್ಕಳದ ಶ್ರೀಧರ ಹೆಬ್ಬಾರ ಮಾತನಾಡಿ ರೈತರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಜಿ.ಆರ್.ಹೆಗಡೆ ಗುಬ್ಬು, ಐ.ಜಿ.ಭಟ್, ಗಣಪತಿ ನಾಯ್ಕ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಎಂ.ಆರ್.ಹೆಗಡೆ ಕೊಡಾಣ , ಡಿ.ಎಂ.ನಾಯ್ಕ ಸಾಲ್ಕೋಡ ಮತ್ತಿತರರು ಉಪಸ್ಥಿತರಿದ್ದರು. ಎಸ್.ಜಿ.ಭಟ್ ನಿರ್ಣಯಗಳನ್ನು ಓದಿ, ವಂದಿಸಿದರು.