ಸಿದ್ದಾಪುರ: ಇಲ್ಲಿನ ಕೆಲ ಕಾಂಗ್ರೆಸ್ ನಾಯಕರು ದಕ್ಷ ಪ್ರಾಮಾಣಿಕ ಅರಣ್ಯ ಇಲಾಖೆಯ ಅಧಿಕಾರಿಯಾದ ವಿನಾಯಕ ಮಡಿವಾಳ ಇವರ ವಿರುದ್ಧ ಷಡ್ಯಂತ್ರ ನಡೆಸಿ ವರ್ಗಾವಣೆ ಮಾಡಲು ಹೊರಟಿರುವುದನ್ನು ಖಂಡಿಸಿ ಯುವ ಮಡಿವಾಳ ಸಮಾಜದ ವತಿಯಿಂದ ತಹಶೀಲ್ದಾರ್ ಹಾಗೂ ಡಿ ಎಫ್ ಓ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿ ವಿನಾಯಕ ಮಡಿವಾಳ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ಮಡಿವಾಳ ಸಮಾಜದ ಅಧಿಕಾರಿ ಎಂಬ ಕಾರಣಕ್ಕೆ ಹಾಗೂ ಕೆಲ ಕಾಂಗ್ರೆಸ್ ನಾಯಕರ ಅಕ್ರಮ ಚಟುವಟಿಕೆಗೆ ಸಹಕಾರ ನೀಡುತ್ತಿಲ್ಲ ಎಂದು ಇವರಿಗೆ ಪದೇ ಪದೇ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ ಬಂದಿರುತ್ತಾರೆ. ಇದೀಗ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ತಾಲೂಕಿನಿಂದ ವರ್ಗಾವಣೆ ಮಾಡಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೇತೃತ್ವದಲ್ಲಿ ಕೆಲ ಕಾಂಗ್ರೆಸ್ ನಾಯಕರು ಪಡ್ಯಂತ್ರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಸಂಭಂದಿಸಿದ ಇಲಾಖೆಯ ಸಚಿವರಿಗೆ, ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಮಡಿವಾಳ ಸಮಾಜದ ವ್ಯಕ್ತಿಗಳಿಗೆ ಅನುಮನಿಸುವುದೇ ವರ್ಗಾವಣೆ ಹಿಂದಿರುವ ಉದ್ದೇಶವಾಗಿದೆ.
ಸಿದ್ದಾಪುರ ಕಾಂಗ್ರೆಸ್ ನಾಯಕರು ವಯಕ್ತಿಕ ಹಿತಾಸಕ್ತಿ ಹಾಗೂ ರಾಜಕೀಯ ಲಾಭಕ್ಕಾಗಿ ತಮ್ಮದೇ ಸರಕಾರ ಇದ್ದರೂ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ನಿಜಕ್ಕೂ ಖಂಡನೀಯ. ಕಾಂಗ್ರೆಸ್ ನಾಯಕರು ಇಂತಹ ದೌರ್ಜನ್ಯ ನಡೆಸಿದರು ಶಾಸಕ ಭೀಮಣ್ಣ ನಾಯ್ಕ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಯಾರ ಒತ್ತಡಕ್ಕೂ ಒಳಗಾಗದೇ ವಿನಾಯಕ ಮಡಿವಾಳ ಅವರನ್ನು ವರ್ಗಾವಣೆ ಮಾಡಬಾರದು ಒಂದೊಮ್ಮೆ ವರ್ಗಾವಣೆ ಮಾಡಿದರೆ ಅಧಿಕಾರಿಗಳ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಬೀದಿಗಿಳಿದು ಯುವ ಮಡಿವಾಳ ಸಮಾಜವು ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಮಡಿವಾಳ ಸಮಾಜದ ಸದಸ್ಯರಾದ ಶ್ರೀನಿವಾಸ್ ಮಡಿವಾಳ, ಗೋವಿಂದ ಮಡಿವಾಳ, ಕಮಲಾಕರ ಮಡಿವಾಳ, ಪ್ರಶಾಂತ ಮಡಿವಾಳ, ವಸಂತ ಮಡಿವಾಳ, ರವಿ ಮಡಿವಾಳ, ಹೇಮಂತ್ ಮಡಿವಾಳ, ನಾಗಭೂಷಣ ಮಡಿವಾಳ, ಸಂತೋಷ್ ಮಡಿವಾಳ, ರಾಕೇಶ ಮಡಿವಾಳ, ಗಣೇಶ ಮಡಿವಾಳ ಮುಂತಾದವರು ಹಾಜರಿದ್ದರು.