ಶಿರಸಿ : ಇಂದಿನ ದಿನಮಾನದಲ್ಲಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಇದ್ದಲ್ಲಿ ದೇಶದ ಅಭಿವೃದ್ಧಿ, ಪ್ರಗತಿ ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿನ ಟಿಪ್ಪು ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಅಂಗನವಾಡಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕಟ್ಟಡವನ್ನು ಉತ್ತಮವಾಗಿ, ಸಮಯಕ್ಕೆ ಸರಿಯಾಗಿ ನಿರ್ಮಾಣ ಮಾಡಲಾಗಿದೆ. ಗುಣಮಟ್ಟದ ಕೆಲಸ ಆಗಿದೆ. ಇದರ ಮಹತ್ವ ಶಿಕ್ಷಣ ವಂಚಿತರಿಗೆ ತಿಳಿಯುತ್ತದೆ. ಕಾರಣ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಅಂಗನವಾಡಿಯಲ್ಲಿ ಬಾಲ್ಯದ ಶಿಕ್ಷಣ ಸಿಗುತ್ತದೆ. ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕಲಿಸಬೇಕು. ಇಲ್ಲಿ ಶಿಕ್ಷಕರು ಬಾಲ್ಯದ ಸೇವೆಯನ್ನು ಉತ್ತಮವಾಗಿ ನೀಡುತ್ತಿದ್ದಾರೆ. ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಿ ಎಂದ ಅವರು, ಇನ್ನಷ್ಟು ಅಂಗನವಾಡಿ ನಿರ್ಮಾಣ ಆಗಬೇಕು. ಬೇಡಿಕೆ ಇದ್ದ ಕಡೆಗಳಲ್ಲಿ ಅಂಗನವಾಡಿ ತೆರೆಯುವ ಮುಖಾಂತರ ಬಾಲ್ಯದ ಶಿಲ್ಷಣ ನೀಡುವ ಕೆಲಸ ಆಗಲಿದೆ ಎಂದರು.
ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿ, ಭಾಷೆಯನ್ನು ಉಳಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ನಂತರ ಯಾವ ಭಾಷೆಯ ಅಗತ್ಯವಿದೆಯೋ ಅದರ ಕಲಿಕೆ ಮಾಡಲಿ. ಆದರೆ ಕನ್ನಡದ ಪ್ರೀತಿ ಇರಲಿ ಎಂದು ಹೇಳಿದರು. ಜೊತೆಗೆ ಟಿಪ್ಪು ನಗರದಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಮಗ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕುಳವೆ ಗ್ರಾಮ ಪಂಚಾಯತ ಅಧ್ಯಕ್ಷೆ ರಂಜಿತಾ ಹೆಗಡೆ, ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಸದಸ್ಯರಾದ ಗಂಗಾಧರ ನಾಯ್ಕ, ಸಂದೇಶ ಭಟ್ಟ ಬೆಳಖಂಡ ಹಾಗೂ ಪ್ರಮುಖರಾದ ದೀಪಕ ದೊಡ್ಡುರು, ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ ಇತರರು ಇದ್ದರು.