ಸಿದ್ದಾಪುರ: ಪ್ರತಿಯೊಬ್ಬರು ದೇವರನ್ನು ಪೂಜಿಸಿದಂತೆ ಹಿರಿಯ ನಾಗರಿಕರನ್ನು ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಪಟ್ಟಣದ ಬಾಲಭವನದಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ, ಹಿರಿಯರನ್ನು ಸನ್ಮಾನಿಸಿ ಮಾತನಾಡಿ, ನಾವು ಮಾಡುವ ಕಾಯಕವನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಬೇಕು. ಪ್ರತಿಯೊಬ್ಬರು ಸಹ ಹಿರಿಯರನ್ನು ಗೌರವದಿಂದ ಕಾಣಬೇಕು. ದೇವರನ್ನು ಪೂಜಿಸಿದಂತೆ ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಹಿರಿಯರ ಆಶೀರ್ವಾದದೊಂದಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡೋಣ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ನೌಕರರ ಸಂಘದ ವತಿಯಿಂದ ತಾಲೂಕಿನ 23 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ವೇಳೆಯಲ್ಲಿ ಅನೇಕರಿಗೆ ಸಹಾಯ ಹಸ್ತ ಚಾಚಲಾಗಿದೆ. ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರ ಶಿರಸಿಯಲ್ಲಿ ನಡೆಸಬೇಕು ಎಂದು ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿದರು.
ಸಂಘದ ನಿವೃತ್ತ ನೌಕರರಾದ ಅಪ್ಪಣ ಗಾಳಿ ಅವರಗುಪ್ಪಾ, ಜಿ.ಐ.ನಾಯ್ಕ ಅರಿಶಿಣಗೋಡ, ಜಿ.ಎಂ.ನಾಯ್ಕ ಬೇಡ್ಕಣಿ, ತಾಲೂಕಿನ ಹಿರಿಯ ನಾಗರಿಕರಾದ ರಾಮಾ ಗಣಪನ್ ಕಾನಗೋಡ, ಮುರುಗಯ್ಯ ಗೌಡರ್ ಕೋಲಶಿರ್ಸಿ, ಶ್ರೀಧರ ಹೆಗಡೆ ಹುಲಿಮನೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ, ಸಿಡಿಪಿಓ ಪೂರ್ಣಿಮಾ ದೊಡ್ಮನಿ, ಸಂಘದ ಉಪಾಧ್ಯಕ್ಷ ಎನ್.ವಿ.ಹೆಗಡೆ ಉಪಸ್ಥಿತರಿದ್ದರು. ಸರ್ವೆ ಇಲಾಖೆಯ ಉಷಾ ನಾಯ್ಕ ನಿರೂಪಿಸಿದರು. ರಂಗಕರ್ಮಿ ಗಣಪತಿ ಹೆಗಡೆ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.