ಶಿರಸಿ : ಆರೋಗ್ಯದ ಜೊತೆಗೆ ಅತೀ ಬಡತನದಿಂದ ಬಳಲುತ್ತಿರುವ ಜನರಿಗೆ ಎರಡು ಹೊತ್ತಿನ ಊಟ ಹಾಗೂ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಮಾಡಬೇಕು. ಆಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ಎಸ್. ಪ್ರಭಾಕರ ಅಭಿಪ್ರಾಯ ಪಟ್ಟರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ ಆರೋಗ್ಯ ಉಚಿತ ಬೃಹತ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಭಾರತದ ಮನುಷ್ಯನ ಸರಾಸರಿ ಆಯುಷ್ಯ ಇತ್ತೀಚೆಗೆ ಹೆಚ್ಚಿರುವುದು ಅಧ್ಯಯನದಿಂದ ತಿಳಿಯುತ್ತಿದೆ. ಅದಕ್ಕೆ ಕಾರಣ ದೇಶ ಕಳೆದ 75 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಆದರೂ ಇನ್ನೂ ಹೆಚ್ಚಿನ ಸಾಧನೆಯ ಅಗತ್ಯವಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡುತ್ತಿದ್ದರೂ ದೇಶದ ಶೇ. 40 ರಷ್ಟು ಜನರಿಗೆ ಒಪ್ಪತ್ತಿನ ಊಟಕ್ಕೂ ಕಷ್ಟವಿದೆ. ಆರ್ಥಿಕ ಅಭಿವೃದ್ಧಿ ಜೊತೆಗೆ ಮಾನವ ಅಭಿವೃದ್ಧಿಯೂ ಬಹಳ ಮುಖ್ಯವಾಗಿದೆ. ಬಡತನದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಎರಡು ಹೊತ್ತಿನ ಊಟ ಹಾಗೂ ಪೌಷ್ಟಿಕ ಆಹಾರ ಲಭ್ಯವಾಗುವಂತೆ ಮಾಡಬೇಕು. ಯಾವ ದೇಶದಲ್ಲಿ ಆರೋಗ್ಯ ಸರಿಯಾಗಿರುತ್ತದೆಯೋ ಆಗ ಸದೃಢ ದೇಶ ಕಟ್ಟಲು ಸಾಧ್ಯ ಎಂದರು.
ನಮ್ಮ ದೇಶದಲ್ಲಿ ಇತ್ತೀಚೆಗೆ ಆರೋಗ್ಯದ ಸೌಲಭ್ಯ ಬಹಳ ದುಬಾರಿಯಾಗುತ್ತಿದೆ. ಕಾರ್ಪೊರೇಟ್ ಆಸ್ಪತ್ರೆಗಳ ವೈದ್ಯರು ಜನ ಸೇವೆ ಮಾಡುತ್ತಿಲ್ಲ. ಕೇವಲ ಹಣ ಮಾಡುವಲ್ಲಿ ನಿರತವಾಗಿವೆ. ಆರೋಗ್ಯ ಸೇವೆ ಜನರ ಕೈಗೆ ಎಟಕುವ ಸ್ಥಿತಿ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅನಾರೋಗ್ಯ ಬರದಂತೆ ತಡೆಯುವುದು ಬಹಳ ಮುಖ್ಯ. ನಮ್ಮೊಳಗೇ ಒಬ್ಬ ವೈದ್ಯನಿದ್ದಾನೆ. ಅದರಂತೆ ರೋಗ ಬರದಂತೆ ತಡೆಯಬೇಕು. ತಂಬಾಕು, ಕುಡಿತ ಸೇರಿ ದುಷ್ಚಟಗಳಿಂದ ದೂರ ಇರುವುದರಿಂದ ರೋಗಗಳಿಂದ ದೂರ ಇರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್ ಸಂಸ್ಥೆಯ ಅಧ್ಯಕ್ಷ ಹಿ. ಚಿ ಬೋರಲಿಂಗಯ್ಯ ಮಾತನಾಡಿ, ರೋಗ ಬಂದ ನಂತರ ಚಿಕಿತ್ಸೆಗೆಗಿಂತ ರೋಗ ಬರುವ ಮೊದಲೇ ಮುಂಜಾಗೃತೆ ವಹಿಸುವುದು ಉತ್ತಮ. ಈ ರೀತಿಯ ಶಿಬಿರ ನಡೆಸುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯದ ಕಾಳಜಿಯೂ ಸಿಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದರು.
ಸ್ಕೊಡ್ ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ರೋಗ ಉಲ್ಬಣವಾಗಿ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಹೋಗುತ್ತಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯದ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಯಾವುದಾದರೂ ಖಾಯಿಲೆ ಅಥವಾ ಚಿಕಿತ್ಸೆ ಅವಶ್ಯಕತೆ ಕಂಡುಬಂದಲ್ಲಿ ಮುಂಜಾಗ್ರತಾ ಕ್ರಮವಾಗಿ ಔಷಧೋಪಚಾರ ಲಭಿಸುತ್ತದೆ. ಸಮಾನ ಮನಸ್ಕ ಸಂಸ್ಥೆಗಳು ಕೈಜೋಡಿಸಿ ಬೃಹತ್ ಆರೋಗ್ಯದ ಉಚಿತ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ ಎಂದರು.
ರೋಟರಿ ಅಧ್ಯಕ್ಷ ಶ್ರೀಧರ ಹೆಗಡೆ ಸ್ವಾಗತಿಸಿದರು. ರಾಜೇಶ್ವರಿ ಭಟ್, ಪ್ರಾರ್ಥಿಸಿದರು. ರವಿ ಹೆಗಡೆ ಗಡಿಹಳ್ಳಿ ನಿರೂಪಿಸಿದರು. ಪ್ರೊ. ಕೆ.ಎನ್ ಹೊಸಮನಿ ವಂದಿಸಿದರು. ವೇದಿಕೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಸ್ಪರ್ಶ್ ಆಸ್ಪತ್ರೆಯ ಡಾ. ಪ್ರಣವ್ ಹೊನ್ನಾವರ, ಡಾ. ಶಿವರಾಮ್ ಕೆ.ವಿ, ಡಾ. ಪಿ. ಎಸ್. ಹೆಗಡೆ, ಸ್ಕೊಡ್‌ವೆಸ್ ಸಂಸ್ಥೆ ಉಪಾಧ್ಯಕ್ಷ ಕೆ. ವಿ ಕೂರ್ಸೆ, ಮೈಕ್ರೋ ಲ್ಯಾಬ್ಸ್, ಬೆಂಗಳೂರಿನ ಕಾರ್ಪೊರೇಟ್ ರಿಜನಲ್ ಮ್ಯಾನೇಜರ್ ಬಿ. ಆರ್. ಪದಕಿ ಇದ್ದರು.
ಈ ಶಿಬಿರವನ್ನು ದೇಸಾಯಿ ಫೌಂಡೇಶನ್ ಟ್ರಸ್ಟ್ ಗುಜರಾತ್, ಸ್ಕೊಡವೆಸ್ ಸಂಸ್ಥೆ ಶಿರಸಿ, ಎಸ್ ಎಸ್ ಸ್ಪರ್ಶ್ ಹಾಸ್ಪಿಟಲ್ ಬೆಂಗಳೂರು, ರೋಟರಿ ಕ್ಲಬ್ ಶಿರಸಿ, ಗಣೇಶ್ ನೇತ್ರಾಲಯ ಶಿರಸಿ ಹಾಗೂ ಟಿ.ಎಸ್.ಎಸ್ ಹಾಸ್ಪಿಟಲ್ ಶಿರಸಿ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಶಿರಸಿ ವಿಭಾಗ ಹಾಗೂ ಉತ್ತರಕನ್ನಡ ಜಿಲ್ಲಾ ಕಾರ್ಯ ನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚಿನ ಜನರು ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.