ಕೊಪ್ಪಳ: ಎನ್‌ಡಿಎ ತೆಕ್ಕೆಗೆ ಜೆಡಿಎಸ್ ಸೇರಿದೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೆ ತಮ್ಮದೇ ಬಲವಿದೆ. ಇದರಿಂದ ನಮಗೆ ಅನುಕೂಲವಾಗಲಿದೆ. ಕೆಲವು ಸಂದರ್ಭದಲ್ಲಿ ರಾಜಕಾರಣದಲ್ಲಿ ಹೊಂದಾಣಿಕೆ ಅನಿವಾರ್ಯವಾಗಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ನಾವೇ ಜೆಡಿಎಸ್ ವಿರುದ್ಧವಾಗಿ ಮಾತನಾಡಿದ್ದೇವೆ ಆದರೆ ಈಗ ಪರಿಸ್ಥಿತಿ ತಿಳಿಯಾಗಿದೆ. ರಾಜಕಾರಣದಲ್ಲಿಯೂ ಕೆಲವು ಸಂದರ್ಭದಲ್ಲಿ ಹೊಂದಾಣಿಕೆಯೂ ಅನಿವಾರ್ಯವಾಗಲಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನದಷ್ಟೇ ನಾವು ಈ ಬಾರಿಯೂ ಗೆಲ್ಲಲಿದ್ದೇವೆ ಎಂದರು. ಕಾವೇರಿ ನೀರು ಹರಿಸುವ ವಿಚಾರ ಸುಪ್ರೀಂ ಕೋರ್ಟ್ ಹಂತದಲ್ಲಿದೆ, ಕೋರ್ಟ್ಗೆ ನಾವು ಮನವರಿಕೆ ಮಾಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನಿಸಬೇಕು. ಪ್ರಧಾನಿಗಳು ಮಧ್ಯ ಪ್ರವೇಶ ಬೇರೆ ವಿಚಾರ. ಕೋರ್ಟ್ನಲ್ಲಿ ಇರುವುದರಿಂದ ಕೋರ್ಟ್ ಮೂಲಕವೇ ಬಗೆಹರಿಸಬೇಕಾಗಿದೆ.
ಕೋರ್ಟ್ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಸುಮ್ಮನೆ ಪ್ರಧಾನಿಗಳತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಮೊದಲೇ ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸುಪ್ರೀಂನಲ್ಲಿ ವಿಚಾರಣೆ ಇರುವಾಗ ಪ್ರಧಾನಿಗಳು ಹೇಗೆ ಮಧ್ಯಪ್ರವೇಶ ಮಾಡಬೇಕು? ಇವರ ಘಟಬಂಧನ್ ಸರ್ಕಾರವೇ ತಮಿಳುನಾಡಿನಲ್ಲಿ ಇರುವುದು. ಅವರ ಬಗ್ಗೆ ಮಾತನಾಡಲಿ ಎಂದರು. ರಾಜ್ಯದಲ್ಲಿ 195 ತಾಲೂಕು ಬರಪೀಡಿತವಾಗಿವೆ. ಒಂದು ರೀತಿ ಬರಕ್ಕೆ ಬಿಜೆಪಿಯೇ ಕಾರಣ ಎನ್ನುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಬರದ ವಿಚಾರದಲ್ಲಿ ಪರಿಹಾರ ಕಾರ್ಯ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಬೇಕು. ಆದರೆ ಸುಮ್ಮನೆ ಸಿಎಂ, ಸಚಿವದ್ವಯರು ಕೇಂದ್ರ ಸರ್ಕಾರದತ್ತ ತೋರಿಸುತ್ತಿದ್ದಾರೆ. ಬರದ ವಿಚಾರದಲ್ಲಿಯೂ ರಾಜಕಾರಣ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಎಷ್ಟಾದರೂ ಡಿಸಿಎಂ ಸ್ಥಾನ ಸೃಷ್ಟಿ ಮಾಡಲಿ. ಬೇಕಿದ್ದರೆ ಜಿಲ್ಲೆಗೊಂದರAತೆ ಡಿಸಿಎಂ ಸ್ಥಾನ ಸೃಷ್ಟಿ ಮಾಡಲಿ. ಆದರೆ ರೈತರ ಪರಿಸ್ಥಿತಿಯನ್ನು ಮೊದಲು ನೋಡಲಿ. ಬರದ ಪರಿಸ್ಥಿತಿ ತಿಳಿಯಲಿ. ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಡಿಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್‌ನ ರಾಯರಡ್ಡಿ, ರಾಜಣ್ಣ ಸೇರಿ ಇತರೆ ನಾಯಕರೇ ಹೇಳುತ್ತಿದ್ದಾರೆ ಎಂದು ಕುಟುಕಿದರು. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರ, ಸ್ವಲ್ಪ ವಿಳಂಬವಾಗಿರುವುದು ನಿಜ. ಹಾಗಂತ ನಾವು ಸುಮ್ಮನೆ ಕುಳಿತಿಲ್ಲ. ನಮ್ಮ ಪಕ್ಷ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ನಮ್ಮ ಹಿರಿಯರು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಒಂದು ಹೆಜ್ಜೆ ಹಿಂದೆ ಸರಿದಾಗ ವೇಗವಾಗಿ ಮುಂದೆ ಹೋಗುತ್ತೇವೆ ಎಂದರ್ಥ ಎಂದರು.