ಶಿರಸಿ: ತಾಲೂಕು ನರೂರು ಗ್ರಾಮದ ಸದಾನಂದ ಬಸಪ್ಪ ಗೌಡ ಎಂಬುವವರ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿ ದಳ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಬನವಾಸಿ ಸಮೀಪದ ನರೂರಿನ ಸದಾನಂದ ಬಸಪ್ಪ ಗೌಡ ಎಂಬುವವರ ಮನೆಯ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ ದಾಸ್ತಾನು ಇಟ್ಟ 2.25 ಲಕ್ಷ ರೂ. ಮೌಲ್ಯದ 64.950 ಕೆ.ಜಿ ತೂಕದ 15 ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ. ಆರೋಪಿತನಾದ ಸದಾನಂದ ಬಸಪ್ಪ ಗೌಡ ನರೂರು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಅಹಮದ್ ಶೇಖ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಮ್.ವಾಲಿ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ ನೇತೃತ್ವದಲ್ಲಿಉಪ ವಲಯ ಅರಣ್ಯಾಧಿಕಾರಿಗಳಾದ ಇಲಿಯಾಸ್ ಶೇಖ್, ರಾಜು ಪೂಜಾರ, ಚಿದಂಬರ ಗೌಡ, ವಾಹನ ಚಾಲಕ ನಂದೀಶ ಗಾಡೀಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.