ಕಿತ್ತೂರು: ಗಳಿಸಿದ್ದನ್ನು ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ದಾನ ಮಾಡಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಕಿತ್ತೂರಿನ ರಿಕ್ಷಾಚಾಲಕ ಮಾಲಕರಿಗೆ ಪ್ರಿಂಟಿಂಗ್ಹುಡ್ ವಿತರಣೆ ಹಾಗೂ ಪಾಸಿಂಗ್ ಯೋಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಒಬ್ಬ ವ್ಯಕ್ತಿಯ ಕಷ್ಟವನ್ನು ತಿಳಿದು ತನ್ನಲ್ಲಿರುವ ಸಂಪತ್ತನ್ನು ಆತನ ಕಷ್ಟಕ್ಕೆ ನೀಡುವುದೇ ನೀಡುವುದೇ ದಾನ. ಕಷ್ಟದ ದಿನಗಳನ್ನು ನೋಡಿ ನಂತರ ಆರ್ಥಿಕವಾಗಿ ಸಬಲತೆ ಸಾಧಿಸಿದ ನಂತರ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂದು ನಿರ್ಧರಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಖಾಕಿ ವಸ್ತ್ರ ಸೇವೆಯ ಸಂಕೇತ. ಸಮಾಜ ಸೇವೆ ಮಾಡುವವರು ಧರಿಸುವ ವಸ್ತ್ರ ಖಾಕಿ. ಇದು ಹೆಮ್ಮೆಯ ಸಂಕೇತ. ಸಮಾಜದಲ್ಲಿ ಖಾಕಿ ಸೇವೆಯ ಸಂಕೇತವಾದರೆ, ಖಾದಿ ಸಮಾಜವನ್ನು ಸಮೃದ್ಧವಾಗಿಡುವ ಕೆಲಸ ಮಾಡುತ್ತದೆ. ಖಾವಿ ಧರ್ಮ ರಕ್ಷಣೆಯ ಸಂಕೇತ. ಅಲ್ಲದೇ ಸರಕಾರದ ಕೆಲ ಯೋಜನೆಗಳು ರಿಕ್ಷಾ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ ಎನ್ನುವುದನ್ನು ಗಮನಿಸಿ ರಿಕ್ಷಾ ಚಾಲಕರಿಗೆ ಪ್ರಿಂಟಿಂಗ್ಹುಡ್ ವಿತರಣೆ ಹಾಗೂ ಪಾಸಿಂಗ್ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದ್ದೇವೆ. ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಸ್ವಾಮೀಜಿ ಸಮಾಜ ಸೇವೆಗೆ ಪ್ರೇರಣೆಯಾಯಿತು. ಜಾತಿ ಮತ ಪಂಥ ಬೇದ ಮಾಡದೇ ಅನ್ನ, ಅಕ್ಷರ, ಆಶ್ರಯ ಮೂರನ್ನೂ ನೀಡಿದಂಥ ಮಹಾತ್ಮರು. ಮೊದಲು ಮಾನವನಾಗು ಎಂದು ಬೋಧನೆ ಮಾಡಿದವರು ಸಿದ್ದಗಂಗಾ ಶ್ರೀಗಳು. ಅಲ್ಲಿ ಆಶ್ರಯ ಪಡೆದು ಕಲಿತ ಅನೇಕರು ಪ್ರಪಂಚದ ಮೂಲೆ ಮೂಲೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೇ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಆಟೋ ರಿಕ್ಷಾ ಚಾಲಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಯಬೇಕಿದೆ. ಆಟೋ ಚಾಲಕರ ಹಿತಾಸಕ್ತಿ ರಕ್ಷಣೆಗೆ ಹಲವು ಹೋರಾಟಗಳು ಮನವಿಗಳು ಎಲ್ಲವೂ ನಡೆದಿದೆ. ಆದರೆ ಈ ವರೆಗೆ ಯರಿಂದಲು ಸಂಪೂರ್ಣ ಬೇಡಿಕೆ ಈಡೇರಿಲ್ಲ. ಆದರೆ ಸಮಾಜ ಸೇವೆಗೆ ಬಂದಿರುವ ಶಿರಸಿಯ ಅನಂತಮೂರ್ತಿ ಹೆಗಡೆ ಅವರು ರಾಜಕೀಯಕ್ಕೆ ಬಂದರೆ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುವ ಭರವಸೆ ಇದೆ ಎಂದರು.
ಕಿತ್ತೂರಿನ ರಿಕ್ಷಾಚಾಲಕ ಮಾಲಕರ ಸಂಘದ ವಿಜಯಕುಮಾರ್ ಶಿಂದೆ, ತಾವು ದುಡಿದ ಹಣದಲ್ಲಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಇವರು ರಿಕ್ಷಾ ಚಾಲರಿಗೆ ಅನುಕೂಲ ಮಾಡಿಕೊಡುತ್ತಿರುವ ಅನಂತಮೂರ್ತಿ ಹೆಗಡೆ ಅವರು ನಮ್ಮ ಮನೆ ಮಗನಂತೆ. ಅವರಿಗೆ ತಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ಇದೇ ಸಂದರ್ಭದಲ್ಲಿ ಹಲವು ಸಾಧಕ ಆಟೋ ಚಾಲಕರಿಗೆ ಸನ್ಮಾನ ನೆರವೇರಿಸಲಾಯಿತು. ವೇದಿಕೆಯಲ್ಲಿ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ಸಮಾಜ ಸೇವಕ ಹಬೀಬ್ ಶಿಲೇದಾರ್, ಮಾರಿಕಾಂಬಾ ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಡಿಎಸ್ಪಿ ರವಿ ನಾಯ್ಕ, ಜೀವನ್ ಮತ್ತಿತರರು ಇದ್ದರು.