ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಇಲ್ಲಿಯ ರಾಗಮಿತ್ರ ಪ್ರತಿಷ್ಠಾನ ಸಂಘಟಿಸಿದ್ದ ಗುರುಅರ್ಪಣೆ ಹಾಗೂ ಕಲಾ ಅನುಬಂಧ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಸಂಗೀತ ಕಲಾಸಕ್ತರಿಗೆ ರಸದೂಟಬಡಿಸಿತು. ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಇನ್ನರ್ವೀಲ್ ಕ್ಲಬ್ ಸದಸ್ಯೆಯರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜನಪ್ರಿಯ ಭಜನೆಗಳನ್ನು ಹಾಡಿ ಶುಭಾರಂಭಗೊಳಿಸಿದರು. ತಬಲಾದಲ್ಲಿ ಸುಧಾಕರ ನಾಯ್ಕ ಮತ್ತು ಹಾರ್ಮೊನಿಯಂನಲ್ಲಿ ಲಲಿತ್ ಶಾನಭಾಗ ಸಹಕರಿಸಿದರು.
ನಂತರ ಬೆಂಗಳೂರಿನ ತಬಲಾವಾದಕ ರೂಪಕ್ ವೈದ್ಯ ತಬಲಾ ಸೋಲೋ ಕಾರ್ಯಕ್ರಮ ನಡೆಸಿಕೊಟ್ಟರು. ವೈವಿಧ್ಯಮಯವಾಗಿ ತಬಲಾದಲ್ಲಿ ಬೊಲ್ಗಳನ್ನು ನುಡಿಸಿ ಪ್ರೇಕ್ಷಕರ ಕರತಾಡನಕ್ಕೆ ಸಾಕ್ಷಿಯಾದರು. ಲೇಹರಾದಲ್ಲಿ ಅಜೇಯ ಹೆಗಡೆ ವರ್ಗಾಸರ ಸಹಕರಿಸಿದರು.
ನಂತರ ಆಮಂತ್ರಿತ ಕಲಾವಿದ, ಖ್ಯಾತ ಗಾಯಕ ವಿದ್ವಾನ್ ದತ್ತಾತ್ರೇಯ ವೇಲನಕರ್ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ಆರಂಭದಲ್ಲಿ ರಾಗ್ ಮಾರುಬಿಹಾಗ್ದಲ್ಲಿ ವಿಸ್ತಾರವಾಗಿ ಹಾಡಿದರು. ದಾಸರಪದ ಹಾಗೂ ಮೀರಾ ಭಜನ್ಗಳನ್ನು ಪ್ರಸ್ತುತಗೊಳಿಸಿದರು. ಕೊನೆಯಲ್ಲಿ ರಾಗ ಭೈರವಿಯೊಂದಿಗೆ ಕಲಾ ಅನುಬಂಧ ಸಂಗೀತ ಸಮಾಪ್ತಿಗೊಳಿಸಿದರು. ಹಾರ್ಮೋನಿಯಂನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾಗು ತಬಲಾದಲ್ಲಿ ರೂಪಕ್ ವೈದ್ಯ ಬೆಂಗಳೂರು, ಹಿನ್ನೆಲೆ ತಂಬೂರದಲ್ಲಿ ಕೀರ್ತಿ ಮತ್ತು ತಾಳದಲ್ಲಿ ಅನಂತಮೂರ್ತಿ ಸಾಥ್ ನೀಡಿದರು.
ಸಂಗೀತ ಕಾರ್ಯಕ್ರಮ ಉದ್ಘಾಟಿಸಿದ ಸಂಗೀತಾಭಿಮಾನಿಗಳಾದ ಆರ್.ಎನ್.ಭಟ್ಟ ಸುಗಾವಿ ಮಾತನಾಡಿ, ಸಂಗಿತಾಭ್ಯಾಸ, ಕೇಳುವುದು ಹಾಗೂ ಹಿರಿಯ ಅನುಭವಿ ಕಲಾವಿದರನ್ನು ಗೌರವಿಸುವುದು ವ್ಯಕ್ತಿಗತವಾಗಿ ಮನುಷ್ಯನಿಗೆ ನೆಮ್ಮದಿ ನೀಡುತ್ತದೆ. ಇದೊಂದು ಒಳ್ಳೆಯ ಕಾರ್ಯವಾಗಿದ್ದು ಕಲಾಭಿಮಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಅತಿಥಿಗಳಾಗಿದ್ದ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಪುಷ್ಪಾ ಭಟ್ಟ ಹಾಗೂ ಗಾಯಕ ದತ್ತಾತ್ರೇಯ ವೇಲನಕರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜೀವಮಾನದ ಸಾಧನೆಗೆ ಅನುಭವಿ ಕಲಾವಿದರಾದ ನಿವೃತ್ತ ಸಂಗೀತ ಶಿಕ್ಷಕ ಪಂ.ಸಂಜೀವ ಪೋತದಾರ್ ದಂಪತಿಯನ್ನು ಶಾಲು ಹೊದೆಸಿ ಫಲ ತಾಂಬೂಲ, ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಗೌರವ ಸ್ವೀಕರಿಸಿದ ಪೋತದಾರ್ ಮಾತನಾಡಿ, ಸಂಗೀತಾಭ್ಯಾಸದ ತಮ್ಮ ಹಿಂದಿನ ದಿನಗಳ ನೆನಪಿಸಿ ಕೃತಜ್ಞತೆ ತಿಳಿಸಿದರು. ಕಾರ್ಯಕ್ರಮ ಸಂಘಟಕ ಹಾಗು ರಾಗಮಿತ್ರ ಪ್ರತಿಷ್ಠಾನದ ಮುಖ್ಯಸ್ಥ ಪ್ರಕಾಶ ಹೆಗಡೆ ಯಡಳ್ಳಿ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.