ಕುಮಟಾ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ತಾಲೂಕಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗ ದೇವಾಲಯಗಳಲ್ಲಿ, ಶಿವಾಲಯಗಳಲ್ಲೂ ಭಕ್ತರು ನಾಗರ ಕಲ್ಲಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಹಳೇ ಹೆರವಟ್ಟಾದ ಹಂಡಿಓಣಿಯಲ್ಲಿರುವ ಶಿವಪ್ಪ ಹೊಸಬಯ್ಯ ನಾಯ್ಕ ಅವರ ಮನೆ ಆವರಣದಲ್ಲಿರುವ ನಾಗರ ಗುಡಿಯನ್ನು ಪರಿಮಳ ಪುಷ್ಪಗಳಿಂದ ಶೃಂಗರಿಸಲಾಯಿತು. ಭಕ್ತರು ತಂದ ಏಳನೀರು, ಕ್ಷೀರಾಭಿಷೇಕ ಮಾಡಿ, ಪಂಚಕಚ್ಚಾಯದ ನೈವೇದ್ಯವನ್ನು ನಾಗ ದೇವರಿಗೆ ಅರ್ಪಿಸಲಾಯಿತು. ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನರಸಿಂಹ ಗೋಳಿ ಕುಟುಂಬದವರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಸುತ್ತಲಿನ ಎಲ್ಲ ಭಕ್ತರು ಬಾಳೆಗೊನೆ, ಹಣ್ಣು-ಕಾಯಿ ಸೇವೆ ಸಲ್ಲಿಸಿ, ನಾಗ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಮಾಸ್ತಿಕಟ್ಟಾ ಸರ್ಕಲ್‌ನ ಮಹಾಸತಿ ದೇವಸ್ಥಾನ, ಕುಂಭೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜಾ ಸೇವೆಯನ್ನು ಭಕ್ತರು ಗೈದರು. ಹತ್ತಿಹಾರ , ಪರಿಮಳ ಪುಷ್ಪ ಸಮರ್ಪಿಸಿದ ಭಕ್ತರು ನಾಗ ದೇವನಿಗೆ ಪ್ರಸಾದ ನೈವೇದ್ಯ ಮಾಡಿದರು. ಮುತೈದೆಯರಿಂದಲೂ ಅರಿಶಿನ ಕುಂಕುಮ ಸೇವೆ ಸಲ್ಲಿಸಿದರು. ಪಟ್ಟಣದ ಹೊಸಹಿತ್ತಲಿನ ಗಣಪತಿ ದೇವರಾಯ ದಿವಾಕರ ಅವರ ಮನೆಯ ಆವರಣದಲ್ಲಿರುವ ನಾಗರಕಟ್ಟೆಯಲ್ಲೂ ವಿಶೇಷ ಪೂಜೆ ನಡೆಯಿತು. ಅಲ್ಲದೇ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ನೆಲೆಸಿರುವ ನಾಗ ದೇವರಿಗೆ ವಿವಿಧ ಹರಕೆಗಳನ್ನು ಸಮರ್ಪಿಸಿದ ಭಕ್ತರು ಪೂಜೆ ಸಲ್ಲಿಸುವ ಮೂಲಕ ಭಕ್ತಿಯಪರಾಕಾಷ್ಠೆ ಮೆರೆದರು.