ಶಿರಸಿ: ಅರಣ್ಯ ಪ್ರದೇಶದ ಸಾಂದ್ರತೆ ಹೆಚ್ಚಿಸುವ ಮತ್ತು ಪರಿಸರ ಜಾಗೃತೆ ಅರಣ್ಯವಾಸಿಗಳಲ್ಲಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿ ಗಿಡ ನೆಡದ ಅರಣ್ಯವಾಸಿಗಳ ಸದಸ್ಯತ್ವ ರದ್ದು ಪಡಿಸಲಾಗುವುದು. ಆದ್ದರಿಂದ ಅರಣ್ಯವಾಸಿಗಳು ಗಿಡ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿರಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಶಿರಸಿ ತಾಲೂಕಿನ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಅರಣ್ಯವಾಸಿಗಳನ್ನ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ಪಡೆಯುವುದು ಸಂವಿಧಾನ ಬದ್ಧ ಹಕ್ಕು. ಅದರಂತೆ, ಪರಿಸರವನ್ನ ಉಳಿಸಿ ಬೆಳೆಸುವುದು ಅರಣ್ಯವಾಸಿಯ ಕರ್ತವ್ಯ. ಭೂಮಿ ಹಕ್ಕಿನ ಹೋರಾಟದೊಂದಿಗೆ ಪರಿಸರ ಉಳಿಸುವ ದಿಶೆಯಲ್ಲಿಯೂ ಅರಣ್ಯವಾಸಿಗಳು ಕಾರ್ಯಪ್ರವೃತ್ತರಾಗಬೇಕೆಂದು ಅವರು ಹೇಳಿದರು.
ಪರಿಶೀಲನಾ ಸಭೆಯಲ್ಲಿ ಪಧಾಧಿಕಾರಿಗಳಾದ ನೇಹರೂ ನಾಯ್ಕ ಬಿಳೂರು, ಕೃಷ್ಣ ಮರಾಠಿ ಮುಂಡಗಾರ್, ಶ್ರೀಕಲಾ ನಾಯ್ಕ ಇಟಗುಳಿ, ಚಂದ್ರಶೇಖರ್ ಶಾನಭಾಗ ಬಂಡಲ, ಗಂಗೂಬಾಯಿ ರಜಪೂತ, ಮಾಲ್ತೇಶ್ ಸಂತೊಳ್ಳಿ, ಶಂಕರ ಗೌಡ ಪಾಟೀಲ್ ಸಂತೊಳ್ಳಿ, ಮಾಬ್ಲೇಶ್ವರ ಪೂಜಾರಿ ಗೌಳಿ, ಸದಾನಂದ ತಿಗಣೆ, ಮೆಹಬೂಬ ಅಲಿ ಬದನಗೋಡ ಮುಂತಾದವರು ಮಾತನಾಡಿದರು.