ಕುಮಟಾ: ಮಾಧ್ಯಮ ಕ್ಷೇತ್ರದ ಮೇಲೆ ಆಧುನಿಕ ತಂತ್ರಜ್ಞಾನಗಳು ಸಾಕಷ್ಟು ಪ್ರಭಾವ ಬೀರುತ್ತಿದ್ದರೂ ಪತ್ರಿಕೆಗಳು ಮಾತ್ರ ಇಂದಿಗೂ ವಸ್ತುನಿಷ್ಠ ವರದಿಗಳ ಮೂಲಕ ಸಮಾಜದಲ್ಲಿ ವಿಶ್ವಾಸ ಉಳಿಸಿಕೊಂಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕರ್ವಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದಿಂದ ಪಟ್ಟಣದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ, ಮಾತನಾಡಿ, ಪ್ರತಿ ವರ್ಷವೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವಿಭಿನ್ನವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದೆ. ತಮ್ಮ ವೃತ್ತಿಯ ಕಾರ್ಯ ಚಟುವಟಿಕೆಯ ನಡುವೆಯು ಸಮಾಜಮುಖಿಯಾದ ಕಾರ್ಯವನ್ನು ಹಮ್ಮಿಕೊಳ್ಳುತ್ತಿರುವ ತಾಲೂಕಿನ ಪತ್ರಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ಸಮಾಜಮುಖಿ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಎಸಿಎಫ್ ಲೋಹಿತ್ ಜಿ., ಬಹುಮಾನ ವಿತರಕರಾಗಿ ಆಗಮಿಸಿದ್ದ ಸಿಪಿಐ ತಿಮ್ಮಪ್ಪ ನಾಯ್ಕ, ಗಿಬ್ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗೀತಾ ಪೈ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಅನ್ಸಾರ್ ಶೇಖ್, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ಕಾರ್ಯ ನಿರ್ವಹಿಸುವ ನಮಗೆ ಯಾವುದೇ ರಕ್ಷಣೆ ಅಥವಾ ಭದ್ರತೆ ಇಲ್ಲ. ವಸ್ತುನಿಷ್ಠ ಮತ್ತು ನಿರ್ಭಿತ ಪತ್ರಿಕೋದ್ಯಮ ನಡೆಸುವುದು ಇವತ್ತಿನ ದಿನಮಾನಗಳಲ್ಲಿ ಕಷ್ಟದ ಕಾರ್ಯವಾಗಿದೆ. ಆದರೂ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೀವಹಿಸುತ್ತಿದ್ದೇವೆ ಎಂದರು.
ಬಹುಮಾನ ವಿತರಣೆ: ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿವಿಎಸ್ಕೆ ಪ್ರೌಢಶಾಲೆಯ ಕೃತಿಕಾ ಭಟ್, ದ್ವಿತೀಯ ಸ್ಥಾನ ಪಡೆದ ಹೆಗಡೆಯ ಶಾಂತಿಕಾ0ಬ ಪ್ರೌಢಶಾಲೆಯ ಯಾಮಿನಿ ಪಟಗಾರ ಮತ್ತು ಕೆಪಿಎಸ್ ನೆಲ್ಲಿಕೇರಿಯ ದೀಕ್ಷಿತಾ ಕೊರಗಾಂವ್ಕರ್, ತೃತೀಯ ಸ್ಥಾನವನ್ನು ಚಿತ್ರಗಿಯ ಮಹಾತ್ಮಗಾಂಧಿ ಪ್ರೌಢಶಾಲೆಯ ನವ್ಯ ನಾಯ್ಕ, ಗಿಬ್ ಬಾಲಕಿಯರ ಪ್ರೌಢಶಾಲೆಯ ಸುಹಾಸಿನಿ ಪೈ ಮತ್ತು ಬಾಡದ ಜನತಾ ವಿದ್ಯಾಲಯದ ಝರಿನ್ ಶೇಖ್ ಅವರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ನೋಟ್ಬುಕ್ ಮತ್ತು ಪೆನ್ ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಾರ್ಯದರ್ಶಿ ಚರಣರಾಜ್ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಸಿದರು. ಪತ್ರಕರ್ತ ಗಣೇಶ ಜೋಷಿ ನಿರೂಪಿಸಿದರು. ಶಿಕ್ಷಕ ಉದಯ ನಾಯ್ಕ ಬಹುಮಾನ ವಿತರಣೆ ಕಾರ್ಯವನ್ನು ನಿರ್ವಹಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಜಾಂಚಿ ರಾಘವೇಂದ್ರ ದಿವಾಕರ ವಂದಿಸಿದರು. ಯೂನಿಯನ್ ಉಪಾಧ್ಯಕ್ಷ ರವಿ ಗಾವಡಿ, ಪತ್ರಕರ್ತರಾದ ಸುಧೀರ ಕಡ್ನೀರ್, ಯೋಗೇಶ ಮಡಿವಾಳ, ನಟರಾಜ ಗದ್ದೆಮನೆ, ಸದಸ್ಯ ವಿನೋದ ಹರಿಕಂತ್ರ, ಶಾಲಾ ಶಿಕ್ಷಕರು, ಸಿಬ್ಬಂದಿ ಸಹಕರಿಸಿದರು.