ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡೀನ್ ಮತ್ತು ನಿರ್ದೇಶಕರು ಡಾ.ಗಜಾನನ ಹೆಚ್ ನಾಯಕ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಶಂಕರ್ ಅಂಗಡಿ ಮತ್ತು ತಂಡದವರಿ0ದ ಬೆಂಕಿ ಅವಘಡ ನಿರ್ವಹಣೆಯ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಮತ್ತು ಅಣಕು ಪ್ರದರ್ಶನ ನಡೆಯಿತು.
ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಂಜುನಾಥ ಸಾಲಿಯವರ ಸಹಕಾರದಿಂದ ಯಲ್ಲಾಪುರ ಅಗ್ನಿಶಾಮಕ ಅಧಿಕಾರಿ ಶಂಕರ್ ಅಂಗಡಿ ಮತ್ತು ಕಾರವಾರ ಅಗ್ನಿಶಾಮಕ ಮತ್ತು ಠಾಣೆಯ ಸಿಬ್ಬಂದಿ ರಾಜೇಶ್ ರಾಣೆ (ಲೀಡಿಂಗ್ ಫೈಯರ್‌ಮೆನ್), ಧನಂಜಯ ನಾಗೇಕರ (ಫೈಯರ್‌ಮೆನ್ ಡ್ರೈವರ್), ವಿರೇಂದ್ರ ತಾಂಡೇಲ್ (ಫೈಯರ್‌ಮೆನ್), ಮಿಥುನ್ ಅಂಕೋಲೆಕರ್ (ಫೈಯರ್‌ಮೆನ್) ಅಗ್ನಿ ಸುರಕ್ಷತೆಯ ಕುರಿತು ಅಣುಕು ಪ್ರದರ್ಶನವನ್ನು ನಡೆಸಿಕೊಟ್ಟರು. ಈ ಅಗ್ನಿ ಸುರಕ್ಷತೆಯ ಅಣುಕು ಪ್ರದರ್ಶನವು ಕ್ರಿಮ್ಸ್ ಸಂಸ್ಥೆಯ ವಿಪ್ಪತ್ತು ನಿರ್ವಹಣೆ ಯೋಜನೆಯ ಅಂಗವಾಗಿ ಏರ್ಪಡಿಸಲಾಗಿತ್ತು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸುಮಾರು 100 ಭೋದಕ ಸಿಬ್ಬಂದಿಗಳು (ವೈದ್ಯರು), 200 ಬೋಧಕೇತರ ಸಿಬ್ಬಂದಿಗಳು, ಶುಶ್ರೂಷಕರು, ತಂತ್ರಜ್ಞರು, 600 ವೈದ್ಯಕೀಯ ವಿದ್ಯಾರ್ಥಿಗಳು, ಅರೆ ವೈದ್ಯಕೀಯ ವಿದ್ಯಾರ್ಥಿಗಳು, ಗೃಹವೈದ್ಯರು, 30 ಸ್ನಾತ್ತಕೋತ್ತರ ವಿದ್ಯಾರ್ಥಿಗಳು, ಇಂಜಿನಿಯರ್ ಗಳು (ಉಪಕರಣ, ಬಯೋಮೆಡಿಕಲ್, ಸಿವಿಲ್) , ಗ್ರೂಪ್ ಡಿ ಸಿಬ್ಬಂದಿಗಳು, ಎಲೆಕ್ಟ್ರಿಷಿಯನ್ ಗಳು, ಕಚೇರಿ ಸಿಬ್ಬಂದಿಗಳು, ಸೆಕ್ಯೂರಿಟಿ ಗಾರ್ಡ್ ಗಳು ಅಗ್ನಿ ಸುರಕ್ಷಾ ಅಣುಕು ಪ್ರದರ್ಶನವನ್ನು ವೀಕ್ಷಿಸಿದರು. ಅಗ್ನಿ ಸುರಕ್ಷತೆಯ ಬಗ್ಗೆ ವಿವರವಾಗಿ ತಿಳಿಸಿ, ಪ್ರಾತ್ಯಕ್ಷಿಕೆ ನಡೆಯಿತು. ಅಣುಕು ಪ್ರದರ್ಶನದ ಮುಖಾಂತರ ವಿವಿಧ ಬೆಂಕಿಯನ್ನು (ಕಾಗದ, ದ್ರವ, ಅನಿಲ, ಲೋಹಕ್ಕೆ ಹತ್ತಿದ ಬೆಂಕಿ) ನಂದಿಸುವದನ್ನು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಕಲಿತರು.
ಫೈರ್ ಎಕ್ಸ್ಟಿಂಗಿಷರ್ಗಳ (ಟೈಪ್ ಎ, ಬಿ, ಸಿ ಮತ್ತು ಸಿಓ2) ಉಪಯೋಗಿಸುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿತರು. ಸಿಲಿಂಡರ್ ಬೆಂಕಿಯನ್ನು ನಂದಿಸುವುದನ್ನು ಸಹ ಕಲಿತರು. ಆಸ್ಪತ್ರೆಯ ಮತ್ತು ಕಾಲೇಜಿನ ವಿವಿಧ ವಿಭಾಗಗಳಲ್ಲಿ ಅಗ್ನಿ ಸುರಕ್ಷತೆಯನ್ನು ಒದಗಿಸುವ ಬಗೆಯನ್ನು ಅರಿತರು. ಅಣುಕು ಪ್ರದರ್ಶನದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶ್ರೀ. ಟಿ. ಸಿ. ಹಾದಿಮನಿ, ವೈದ್ಯಕೀಯ ಅಧೀಕ್ಷಕರು ಡಾ. ಶಿವಾನಂದ್ ಕುಡ್ತರಕರ್, ಪ್ರಾಂಶುಪಾಲರು ಡಾ. ಶಿವಕುಮಾರ ಜಿ ಎಲ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಂಜುನಾಥ್ ಭಟ್, ಉಪ ವೈದ್ಯಕೀಯ ಅಧೀಕ್ಷಕರು ಡಾ. ಮಧುಕರ್ ಕೆ ಟಿ, ಶುಶ್ರೂಷಾಧೀಕ್ಷಕರು ಶ್ರೀಮತಿ ಲಕ್ಷ್ಮೀ ಕೋಣೆಸರ ಭಾಗವಹಿಸಿದ್ದರು. ಸಂಸ್ಥೆಯ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ ಆಂತರಿಕ ಮೌಲ್ಯಮಾಪಕ ಡಾ.ಮಾಲತೇಶ್ ಉಂಡಿ ಅಣಕು ಪ್ರದರ್ಶನದ ಸಂಯೋಜನೆ ಮಾಡಿದರು.