ಯಲ್ಲಾಪುರ: ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಕಾರ್ಯಕರ್ತನೂ ಜನರ ಮೇಲೆ ಅಥವಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಯಾರಿಗೂ ತೊಂದರೆ ನೀಡಿರದಿದ್ದರು, ಸುಮ್ಮನೆ ಪತ್ರಿಕೆಗಳಲ್ಲಿ ಶಾಸಕರು ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಅಲ್ಲದೇ ನಮ್ಮ ಕಾರ್ಯಕರ್ತರಿಗೆ ಜನರ ಮತ್ತು ಅಧಿಕಾರಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಹೇಳಿದ್ದೇನೆ. ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದರೂ ನಾವು ವರ್ಗಾವಣೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದರು.
ಕಾoಗ್ರೆಸ್ ಪಕ್ಷ ಕಾನೂನು ವಿರುದ್ಧವಾದ ಯಾವ ಕಾರ್ಯವನ್ನೂ ಮಾಡುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಇದ್ದಾಗಲೂ ಜೆಸಿಬಿ ಬಳಸುವುದನ್ನು ನಾವು ವಿರೋಧಿಸುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಮಾತನಾಡಿ, ಯಲ್ಲಾಪುರ ಕ್ಷೇತ್ರದ ಶಾಸಕರ ಹೇಳಿಕೆಯನ್ನು ನಮ್ಮ ಪಕ್ಷ ಖಂಡಿಸುತ್ತದೆ. ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪೊಲೀಸ್‌ರು ಪಹರೆ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಬಡವರಿಗೆ ಸಹಾಯ, ಭ್ರಷ್ಟಾಚಾರಮುಕ್ತ ಸರ್ಕಾರ ನೀಡುತ್ತದೆ ಎಂದರು.
ಹಿರಿಯ ಮುಖಂಡ ಎನ್.ಕೆ.ಭಟ್ಟ ಮೇಣಸುಪಾಲ್ ಮಾತನಾಡಿ ಕಾಂಗ್ರೆಸ್ ಪಕ್ಷದವರು ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಖಂಡಿಸುತ್ತೇವೆ. ದಬ್ಬಾಳಿಕೆಗಳೆಲ್ಲವೂ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ನಡೆದಿದೆ ಎಂದರು.
ಪ್ರಮುಖರಾದ ಉಲ್ಲಾಸ ಶಾನಭಾಗ, ರವಿ ನಾಯ್ಕ, ವಿ.ಎಸ್.ಭಟ್ಟ, ಎಸ್.ಎಂ.ಭಟ್ಟ, ಅನೀಲ ಮರಾಠೆ, ಗಜಾನನ ಭೂರ್ಮನೆ, ವಿ.ಎಸ್.ಭಟ್ಟ ಕಾರೇಮನೆ, ನರಸಿಂಹ ನಾಯ್ಕ, ಎಂ ಡಿ ಮುಲ್ಲಾ, ಬಾಬಾ ಜಾನ್, ಮತ್ತಿತರರು ಉಪಸ್ಥಿತರಿದ್ದರು.