ಅಂಕೋಲಾ: ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲೊoದಾದ ಅಂಕೋಲೆಯ ಕರ್ನಾಟಕ ಸಂಘದ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ ಕೆ.ವಿ.ನಾಯಕ, ಅಧ್ಯಕ್ಷರಾಗಿ ಪತ್ರಕರ್ತ ವಿಠ್ಠಲದಾಸ ಕಾಮತ್, ಕಾರ್ಯದರ್ಶಿಯಾಗಿ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇಲ್ಲಿಯ ಕನ್ನಡ ಭವನದಲ್ಲಿ ಸಂಘದ ಹಿರಿಯ ಸದಸ್ಯರೂ, ಚಿಂತಕರೂ ಆಗಿರುವ ಕಾಳಪ್ಪ ಎನ್. ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿ ಲೇಖಕಿ ಹೊನ್ನಮ್ಮ ನಾಯಕ, ಸಹಕಾರ್ಯದರ್ಶಿಯಾಗಿ ಶಿಕ್ಷಕ ರಾಜೇಶ ನಾಯಕ, ಖಜಾಂಚಿಯಾಗಿ ಉಪನ್ಯಾಸಕ ಎಸ್.ಆರ್.ನಾಯಕ ಆಯ್ಕೆ ಆದರು.
ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ, ಕರ್ನಾಟಕ ಸಂಘವನ್ನು ಈ ಆಡಳಿತ ಮಂಡಳಿ ಗತ ವೈಭವಕ್ಕೆ ಮರಳಿಸಲಿ. ಶಾಲಾ ಕಾಲೇಜುಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಈ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಸ.ಪ. ಗಾಂವಕರ ದತ್ತಿ ನಿಧಿಯನ್ನು ಸ್ಥಾಪಿಸಬೇಕೆಂಬ ಬಹುಕಾಲದ ಕನಸನ್ನು ನನಸು ಮಾಡಲಿ ಎಂದರು.
ನಿವೃತ್ತ ಮುಖ್ಯಾಧ್ಯಾಪಕ ರವೀಂದ್ರ ಕೇಣಿ, ಹಿರಿಯ ಸಾಹಿತಿ ವಿಠ್ಠಲ ಗಾಂವಕರ್ ಮಖ್ಯಾಧ್ಯಾಪಕ ಪ್ರಭಾಕರ ಬಂಟ, ಪ್ರೊ. ವಿನಾಯಕ ಹೆಗಡೆ ಅಭಿನಂದಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಚಿಂತಕ ಕಾಳಪ್ಪ ನಾಯಕ ಮಾತನಾಡಿ, ಕರ್ನಾಟಕ ಸಂಘದ ಅಭ್ಯುದಯ ಹಿನ್ನೆಲೆಯಲ್ಲಿ ಸಲಹೆ ಸೂಚನೆ ನೀಡಿದರು. ನಿಕಟಪೂರ್ವ ಕಾರ್ಯದರ್ಶಿ ಅರವಿಂದ ನಾಯಕ ಸ್ವಾಗತಿಸಿದರು.ನಿಕಟಪೂರ್ವ ಸಹ ಕಾರ್ಯದರ್ಶಿ ವಾಸುದೇವ ನಾಯಕ ವರದಿ ಓದಿದರು. ನೂತನ ಕಾರ್ಯದರ್ಶಿ ಮಹೇಶ ನಾಯಕ ವಂದಿಸಿದರು.