ಶಿರಸಿ: ಗೃಹಸ್ಥಾಶ್ರಮದ ಅಂತಃಸತ್ವ ಮೌಲ್ಯ ಉಳಿಸಿಕೊಂಡು ಹೋಗುವುದು ಎಲ್ಲಾ ನವ ದಂಪತಿಗಳ ಆದ್ಯತೆ ಆಗಬೇಕು ಎಂದು ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ನುಡಿದರು.
ಅವರು ಬೆಂಗಳೂರಿನ ಅಭ್ಯುದಯದಲ್ಲಿ ಶ್ರೀ ಸರ್ವಜ್ಞೇಂದ್ರ ಪ್ರತಿಷ್ಠಾನ ಹಾಗೂ ಬೆಂಗಳೂರು ಸ್ವರ್ಣವಲ್ಲೀ ಸೀಮಾ ಪರಿಷತ್ ಆಶ್ರಯದಲ್ಲಿ ನಡೆದ ‘ಧನ್ಯೋ ಗೃಹಸ್ಥಾಶ್ರಮ’ ದಂಪತಿ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಆಶೀರ್ವಚನ ನುಡಿದರು. ಪ್ರತಿಯೊಬ್ಬ ಗೃಹಸ್ಥರು ಹಾಗೂ ನವದಂಪತಿಗಳು ಒಬ್ಬರೊಬ್ಬರು ಪರಸ್ಪರ ಅರಿತು ಅರ್ಥ ಮಾಡಿಕೊಂಡು ನಡೆಯಬೇಕು. ವೈವಾಹಿಕ ಬದುಕನ್ನು ಹೊಂದಾಣಿಕೆಯಿಂದ ಬದುಕಬೇಕು. ಸಾತ್ವಿಕ ಆಹಾರ ಪದ್ಧತಿಯನ್ನು ಅನುಷ್ಠಾನದಲ್ಲಿ ಇಟ್ಟುಕೊಳ್ಳಬೇಕು ಎಂದು ಶ್ರೀಗಳು ನುಡಿದರು.
ಸಕಾಲದಲ್ಲಿ ಸಂತಾನಕ್ಕೆ ಆದ್ಯತೆ ನೀಡಬೇಕಾದ್ದೂ ಆದ್ಯತೆಯ ಅಂಶವಾಗಿದ್ದು, ಇದು ವೈವಾಹಿಕ ಜೀವನದ ಮುಖ್ಯ ಅಂಶವೂ ಹೌದು ಎಂದ ಶ್ರೀಗಳು ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ನಾರಾಯಣ ಭಟ್ ಬಳ್ಳಿ, ಬೆಂಗಳೂರು ಸೀಮಾ ಪರಿಷತ್ ಅಧ್ಯಕ್ಷ ಶಿವರಾಮ್ ಹೆಗಡೆ ಕಾಗೇರಿ, ಅನಂತಮೂರ್ತಿ ಭಟ್, ಡಾ.ಕೃಷ್ಣ ಭಟ್, ವಿ.ಎಂ.ಹೆಗಡೆ ತ್ಯಾಗಲಿ, ಡಾ. ಸಾವಿತ್ರಿ ಸಾಂಭಮೂರ್ತಿ, ನರಸಿಂಹ ಹೆಗಡೆ, ನರಹರಿ ಹೆಗಡೆ, ಪ್ರಶಾಂತ್ ಭಟ್ ಇತರರು ಇದ್ದರು.