ಕುಮಟಾ: ಪಟ್ಟಣದ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.
ತಾಲೂಕ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯ ನಿಮಿತ್ತ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಜಾಗೃತಿ ಜಾಥದಲ್ಲಿ ವಿದ್ಯಾರ್ಥಿಗಳು ಸೈಕಲ್ ಜಾಥದ ಮೂಲಕ ಜನಜಾಗೃತಿ ಮೂಡಿಸಿದರು. ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಪಾರ್ಶ್ವ ವಾಯು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ನಡೆದ ಈ ಜಾಥಾದ ಪ್ರಾರಂಭದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ. ಆಜ್ಞಾ ನಾಯಕ ಸೈಕಲ್ ಚಾಲನೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಶಾಲಾ ಮುಖ್ಯಾಧ್ಯಾಪಕ ಪಾಂಡುರಂಗ ಶೇಟ್ ವಾಗ್ರೇಕರ್ ಜಾಥಾಗೆ ಹಸಿರು ನಿಶಾನೆ ನೀಡಿದರು. ಸೈಕಲ್ ತಂದ ಶಾಲಾ ವಿದ್ಯಾರ್ಥಿಗಳು ಸೈಕಲ್ ಏರಿ ಚಿತ್ರಗಿ ಊರಲ್ಲೆಲ್ಲಾ ಜಾಥಾದಲ್ಲಿ ಹರ್ಷೋಲ್ಲಾಸದಿಂದ ಭಾಗವಹಿಸಿದರೆ, ಉಳಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಘೋಷಣೆ ಕೂಗುತ್ತಾ ನಡಿಗೆಯ ಮೂಲಕ ಸಾಥ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ನಾಯ್ಕರ ನಿರ್ದೇಶನದಂತೆ, ನಡೆದ ಈ ಜಾಗ್ರತಿ ಜಾಥಾದಲ್ಲಿ ಆರೋಗ್ಯ ಇಲಾಖೆಯ ಕಚೇರಿ ಸಿಬ್ಬಂದಿ, ಪುರಸಭಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ಹಳಕಾರ ಕ್ರಾಸನ ನಮ್ಮ ಕ್ಲಿನಿಕ್ ನ ಸಿಬ್ಬಂದಿ, ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದದವರು ಪಾಲ್ಗೊಂಡರು.