ಭಟ್ಕಳ: ಇಲ್ಲಿನ ಬೆಂಗ್ರೆಯ ಉಸಿರಾ ಇಂಡಸ್ಟ್ರೀಸ್ ನ ಎಂ.ಡಿ.ಮ್ಯಾಥ್ಯೂ ಅವರಿಗೆ ರಾಜ್ಯಮಟ್ಟದ ರೈತ ರತ್ನ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕ ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಲಾವಂಚ ಕೃಷಿ ಮತ್ತು ಅದರ ಬೇರಿನಿಂದ ಕಲಾಕೃತಿಗಳನ್ನು ತಯಾರಿಸಿ ದೇಶ ವಿದೇಶಗಳಲ್ಲಿಯೂ ಗುರುತಿಸುವಂತೆ ಮಾಡಿದ ಶ್ರೇಯಸ್ಸು ಮ್ಯಾಥ್ಯೂ ಅವರಿಗೆ ಸಲ್ಲುತ್ತದೆ. ಲಾವಂಚ, ನೋನಿ ಮತ್ತು ಔಷಧಿಯ ಸಸ್ಯಗಳ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿದ್ದಲ್ಲದೇ ಅನೇಕ ಯುವಕ ಯುವತಿಯರಿಗೆ ಉದ್ಯೋಗವನ್ನು ಸಹ ಕಲ್ಪಿಸಿದ್ದಾರೆ. ಇವರಿಂದ ಕಲಿತ ಅನೇಕರು ಸ್ವಂತ ಉದ್ಯಮಿಗಳಾಗಿಯೂ ಬೆಳೆದಿದ್ದಾರೆ.
ಕೃಷಿ ಕ್ಷೇತ್ರದ ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇತ್ತೀಚೆಗೆ ಸುವರ್ಣ ವಾಹಿನಿ ಮತ್ತು ಕನ್ನಡ ಪ್ರಭ ಮಾಧ್ಯಮದಿಂದ ನೀಡಲಾಗುವ ರೈತರತ್ನ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಎಂಬ ಪರಿಕಲ್ಪನೆಯಡಿಯಲ್ಲಿ ಎಂ.ಡಿ.ಮ್ಯಾಥ್ಯೂ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿತು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಕೋಶಾಧ್ಯಕ್ಷ ಶ್ರೀಧರ ಶೇಟ್, ಸಾಹಿತಿ ಮಾನಾಸುತ, ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಭಂಡಾರಿ , ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ಹಾಗೂ ಮ್ಯಾಥ್ಯೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.