ಕಾರವಾರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನ ದಿನದ ಪೂರ್ವ ಭಾವಿಯಾಗಿ ಏ.30ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ತೆರೆದಿಟ್ಟು ಮತದಾರರು ಮತ ಹಾಕುವ ಮತಗಟ್ಟೆಗಳ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದ್ದು, ಅಂದು ಜಿಲ್ಲೆಯಾದ್ಯಂತ ಮತದಾರರ ನಡಿಗೆ ಮತಗಟ್ಟೆಯ ಕಡೆಗೆ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲ ಮತದಾರರು ಬಂದು ತಮ್ಮ ತಮ್ಮ ಮತಗಟ್ಟೆಳನ್ನು ನೋಡಬಹುದಾಗಿದೆ ಎಂದು ಸಿಇಒ ಈಶ್ವರ ಖಂಡೂ ತಿಳಿಸಿದ್ದಾರೆ.
ಎಲ್ಲಾ ಪ್ರಮುಖ ಸ್ಥಳ, ನಗರ, ಜಿಲ್ಲೆ, ಪಟ್ಟಣ, ಹೋಬಳಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಅತೀ ಕಡಿಮೆ ಮತದಾನ ಪ್ರಮಾಣ ದಾಖಲಾಗಿರುವ ಮತಗಟ್ಟೆಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಇರುವ ಚಿತ್ರಕಲಾ ಶಿಕ್ಷಕರಿಂದ ಹೆಚ್ಚಿನ ಜನ ಸೇರುವ ದಿನ ಮತ್ತು ಜಾಗಗಳಲ್ಲಿ ಮತದಾನ ದಿನಾಂಕ, ಸಮಯ, ಮತದಾನ ಮಾಡಲು ತೆಗೆದುಕೊಂಡು ಹೋಗಬಹುದಾದ ದಾಖಲೆಗಳು ಹಾಗೂ ಮತದಾನ ಕೇಂದ್ರ ಮತ್ತು ಮತದಾನ ಮಾಡುವ ಬಗೆಗಿನ ವಿವಿಧ ಮಾಹಿತಿಗಳನ್ನು ತಿಳಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.