ಕಾರವಾರ: ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಕ್ರೂಜರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ರಾಜ್ಯ ವಿಚಕ್ಷಣ ದಳ ದಾಳಿ ನಡೆಸಿ ಸುಮಾರು 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತುಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಬಗೀಲಿ ಅಜಯ ಗೌಡ ಬಂಧಿತ ಆರೋಪಿತನಾಗಿದ್ದಾನೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾದ ಹಿನ್ನಲೆ ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅದರಂತೆ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ಹಾಗೂ ವಿಚಕ್ಷಣ ದಳದ ಸಿಬ್ಬಂದಿ ವಾಹನಗಳನ್ನ ಪರಿಶೀಲನೆ ನಡೆಸುತ್ತಿದ್ದ ವೇಳೆ ಆಂಧ್ರಪ್ರದೇಶ ಮೂಲದ ಕ್ರೂಜರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ. ಸುಮಾರು 17.5 ಲೀಟರ್ ಗೋವಾ ಮದ್ಯ, 3.75 ಲೀಟರ್ ಗೋವಾ ಫೆನ್ನಿ ಹಾಗೂ 3.75 ಲೀಟರ್ ಗೋವಾ ವೈನ್ ಪತ್ತೆಯಾಗಿದ್ದು ಇವುಗಳ ಅಂದಾಜು ಮೌಲ್ಯ 52 ಸಾವಿರ ರೂಪಾಯಿ ಆಗಿದೆ. ಈ ವೇಳೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಕೆ ಮಾಡಲಾದ 15 ಲಕ್ಷ ಮೌಲ್ಯದ ಕ್ರೂಜರ್ ವಾಹನ ಸೇರಿ ಒಟ್ಟೂ 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನ ಜಪ್ತುಪಡಿಸಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಬಕಾರಿ ಉಪ ನಿರೀಕ್ಷಕ ಪಿ.ಕೆ. ಹಳದನಕರ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಅಕ್ರಮ ಸಾಗಾಟದಾರರಿಗೆ ಗಡಿಭಾಗದಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಿರುವ ಸಂದೇಶ ರವಾನಿಸಿದ್ದಾರೆ.