ಶಿರಸಿ : ಮಹಾರಾಷ್ಟ್ರದ ನಾಗಪುರದಲ್ಲಿ ಮಾರ್ಚ್ 20 ರಿಂದ 22 ರವರೆಗೆ 3 ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಜಿ-20 ಒಕ್ಕೂಟ ರಾಷ್ಟ್ರಗಳ ಭಾಗವಾದ ಸಿವಿಲ್-20 ಇಂಡಿಯಾ 2023 ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಮುದಾಯಾಭಿವೃದ್ಧಿ ತಜ್ಞ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ್ ನಾಯ್ಕ ಭಾಗವಹಿಸಲಿದ್ದಾರೆ.
ಸಿ-20 ಇದೊಂದು ಅಂತಾರಾಷ್ಟೀಯ ನಾಗರೀಕ ಸಮುದಾಯ ಸಂಸ್ಥೆಗಳ ವೇದಿಕೆಯಾಗಿದ್ದು, ಜಿ-20 ದೇಶಗಳ ಒಕ್ಕೂಟದ ಅಧೀಕೃತ ಭಾಗವಾಗಿದೆ. ಸಿವಿಲ್ ಸೊಸೈಟಿ ಆರ್ಗನೈಜೆಷನ್ ವಿಶ್ವದೆಲ್ಲೆಡೆ ಸಮುದಾಯಗಳ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇಶಗಳ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ದೇಶಗಳ ಸಾಮಾನ್ಯ ನಾಗರೀಕರ ಸಮಸ್ಯೆಗಳು, ಅಶೋತ್ತರಗಳನ್ನು ಜಿ-20 ದೇಶಗಳ ಒಕ್ಕೂಟದ ಅಂತಾರಾಷ್ಟ್ರೀಯ ನಾಯಕರ ಗಮನಕ್ಕೆ ತರಲು ಸಿ-20 ಪ್ರಮುಖ ಹಾಗೂ ಅಧಿಕೃತ ವೇದಿಕೆಯಾಗಿದೆ.
ಪ್ರತಿಷ್ಠಿತ ಜಿ-20 ಒಕ್ಕೂಟದ ನಾಯಕತ್ವವನ್ನು ಈ ಬಾರಿ ಭಾರತ ವಹಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಒಕ್ಕೂಟದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿವಿಲ್-20 ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶವನ್ನು ಈ ವರ್ಷ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಕರ್ನಾಟಕದಿಂದ 3 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಅವರಲ್ಲಿ ಡಾ ವೆಂಕಟೇಶ್ ನಾಯ್ಕ ಒಬ್ಬರಾಗಿದ್ದಾರೆ.
ವಿಶ್ವದ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಶೈಕ್ಷಣಿಕ ಹಾಗೂ ಆರ್ಥಿಕ ತಜ್ಞರು, ಸರಕಾರಗಳ ಪ್ರತಿನಿಧಿಗಳು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ನೀತಿ ನಿರೂಪಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪ್ರಪಂಚದ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹಾಗೂ ಮಾನವೀಯತೆ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಿವಿಲ್ ಸೊಸೈಟಿ ಆರ್ಗನೈಜೆಷನ್ ಗಳ ಪಾತ್ರದ ಕುರಿತು ಡಾ.ವೆಂಕಟೇಶ ನಾಯ್ಕ ವಿಷಯ ಮಂಡಿಸಲಿದ್ದಾರೆ.
ಅಭಿನಂದನೆ :
ಈ ಪ್ರತಿಷ್ಟಿತ ಸಿವಿಲ್-20 ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಡಾ.ವೆಂಕಟೇಶ ನಾಯ್ಕರವರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭೀಮಣ್ಣ ನಾಯ್ಕ, ಸ್ಕೊಡ್ವೆಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜೇಂದ್ರಕುಮಾರ, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಸ್ಥ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.