ದಾಂಡೇಲಿ: ನಗರದ ಜನತೆಯ ಜೀವನಾಡಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ. ಕಾರ್ಮಿಕರು ಇದ್ದರೇ ಕಾರ್ಖಾನೆ. ಕಾರ್ಖಾನೆ ಪ್ರಗತಿಯೆಡೆಗೆ ಸಾಗಬೇಕು, ಕಾರ್ಮಿಕರು ನೆಮ್ಮದಿಯ ಜೀವನವನ್ನು ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಜಂಟಿ ಸಂಧಾನ ಸಮಿತಿ ಒಮ್ಮತದ ನಿರ್ಧಾರದೊಂದಿಗೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಜಂಟಿ ಸಂಧಾನ ಸಮಿತಿಯ ಸದಸ್ಯ ಬಿ.ಡಿ.ಹಿರೇಮಠ ಹೇಳಿದರು.
ಕಾಗದ ಕಾರ್ಖಾನೆಯಲ್ಲಿ ನಡೆಯುತ್ತಿರುವ ಗುತ್ತಿಗೆ ಕಾರ್ಮಿಕರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನಿನಲ್ಲಿ ಲಿಂಗಭೇಧವಿಲ್ಲ. ಆ ಕಾರಣಕ್ಕಾಗಿ ಎಲ್ಲರು ದುಡಿಯುವ ಕೈಗಳು. ಕಾನೂನಿನ ಚೌಕಟ್ಟಿನಡಿಯಲ್ಲಿ ಇರುವಂತಹ ಕ್ರಿಯೆಗಳಿಗೆ ನಮ್ಮ ಸಹಕಾರವಿದೆ. ಈ ನಿಟ್ಟಿನಲ್ಲಿ ದಾಂಡೇಲಿ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಬೆಳವಣಿಗೆಯಲ್ಲಿ ಕಾರ್ಖಾನೆಯ ಮಹಿಳಾ ಕಾರ್ಮಿಕರ ಪಾತ್ರವು ಬಹುಮುಖ್ಯವಾಗಿದೆ ಎಂದರು.