ಗೋಕರ್ಣ: ನಾನು ಬ್ರಾಹ್ಮಣ ಸಮುದಾಯದ ವಿರೋಧಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಅರ್ಚಕರು, ಬ್ರಾಹ್ಮಣ ಸಮುದಾಯದ ಬಗ್ಗೆ ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ನಿಮ್ಮ ಕುಟುಂಬದ ಬಗ್ಗೆ ನಮಗೆ ಅಭಿಮಾನವಿದೆ. ಆದರೆ ನಿಮ್ಮ ಹೇಳಿಕೆ ಬೇಸರ ತಂದಿದೆ. ಈ ಬಗ್ಗೆ ಈ ಕ್ಷೇತ್ರದಲ್ಲಿಯೇ ಸ್ಪಷ್ಟೀಕರಣ ನೀಡಿ ಎಂದು ಹೇಳಿದ್ದಾರೆ.
ಅರ್ಚಕರ ಮಾತಿಗೆ ಉತ್ತರಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಬ್ರಾಹ್ಮಣ ಸಮುದಾಯದ ವಿರೋಧಿಯಲ್ಲ. ನಾವು ಹಿಂದೂಗಳ ರಕ್ಷಣೆ ಮಾಡುತ್ತೇವೆ. ಬಿಜೆಪಿ ನಾಯಕರು ಪೇಶ್ವೆ ಆಡಳಿತ ಮಾಡುತ್ತಿದ್ದಾರೆ ಎಂಬುದನ್ನು ಹೇಳಿದ್ದೇನೆ. ನಾವು ಬ್ರಾಹ್ಮಣರ ವಿರೋಧಿಯಲ್ಲ. ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ದೇವೇಗೌಡರು. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಮಾಡಲು ಹೋಗಿ ಜುಬ್ಬಾ ಹರಿಸಿಕೊಂಡು ಬಂದವರು. ನಾನು ಸಿಎಂ ಆಗಿದ್ದಾಗ ಬ್ರಾಹ್ಮಣರ ಭವನ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೆ. ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾನು. ಹಾಗಾಗಿ ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ, ಬ್ರಾಹ್ಮಣರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ತಿಳಿಸಿದರು.
ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಏನು ಮಾಡಿದೆ ಎಂದು ಹೇಳಿ? ಹಿಂದೂಗಳ ಹೆಸರಲ್ಲಿ ಅಧಿಕಾರಕ್ಕೆ ಬಂದು ಏನು ಮಾಡಿದರು ಎಂಬುದು ಗೊತ್ತಿದೆ. ನಳೀನ್ ಕುಮಾರ ಕಟೀಲ್ ಗೆ ರಾಜಕೀಯದ ಬಗ್ಗೆ ಏನು ಗೊತ್ತಿದೆ? ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ರಾಜ್ಯದ ಜನರು ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ. ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.