ಸಿದ್ದಾಪುರ: ಕವಿಗಳ ಸಂಖ್ಯೆ ಇಂದು ಅಧಿಕವಾಗುತ್ತಿದೆ. ಅನೇಕ ಕೃತಿಗಳು ಹೊರಬರುತ್ತಿವೆ. ಆದರೆ ಅದರ ಗುಣಮಟ್ಟವನ್ನು ಹೆಚ್ಚಿಸಲು ಕವಿಗಳು ಉತ್ತಮ ಕೃತಿಗಳನ್ನು ಅಧ್ಯಯನ ಮಾಡಬೇಕಾದುದು ಅಗತ್ಯವಿದೆ. ಕನ್ನಡದಲ್ಲಿ ಅನೇಕ ಕೃತಿಗಳು ಇಂದು ಹೊರಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಕನ್ನಡ ಭಾಷೆ ಎಂದಿಗೂ ಕ್ಷೀಣವಾಗದ ಭಾಷೆಯಾಗಿದ್ದು, ಎಲ್ಲರೂ ಅಭಿಮಾನದಿಂದ ಸಾಹಿತ್ಯ, ವ್ಯವಹಾರ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸಬೇಕು ಎಂದು ಖ್ಯಾತ ಸಾಹಿತಿ ಶಾ.ಮಂ.ಕೃಷ್ಣರಾವ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡುತ್ತಾ ಹೇಳಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸಾಮಾಜಿಕ ಧುರೀಣ ಕೆ.ಜಿ. ನಾಯ್ಕ ಹಣಜೀಬೈಲ, ವೀರಭದ್ರ ನಾಯ್ಕ, ವಿ.ಎನ್. ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನಮನೆ, ಕೆ.ಆರ್. ವಿನಾಯಕ, ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಅವರುಗಳು ಮಾತನಾಡಿದರು. ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಅವರು ಮಾತನಾಡಿದರು.
ಸರ್ವಾಧ್ಯಕ್ಷತೆಯನ್ನು ವಹಿಸಿದ ಆರ್.ಕೆ.ಹೊನ್ನೆಗುಂಡಿ ಅವರು ಮಾತನಾಡಿ ಸಮ್ಮೇಳನ ಸಂಪೂರ್ಣವಾಗಿ ಯಶಸ್ಸು ಕಂಡಿದೆ. ಅನೇಕ ಸಾಹಿತ್ಯ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಸಿಕ್ಕಿದ್ದು ಅನೇಕ ಯುವಪ್ರತಿಭೆಗಳು ಇಲ್ಲಿ ಕಂಡು ಬಂದವು. ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ಘನತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರುಗಳು ಶಾರದಾ ರಾಯ್ಕರ, ಎಂ. ವಿಠ್ಠಲ ಅವರಗುಪ್ಪಾ, ಮೀರಾ ಹಬ್ಬು, ದರ್ಶನ ಹರಿಕಾಂತ, ನಾಗರಾಜ ನಾಯ್ಕ, ಮಹಾಲಿಂಗಯ್ಯ ಕುಂದಗೋಳ, ಯೋಗೇಶ ಶಾನಭಾಗ, ಧನಂಜಯ ನಾಯ್ಕ, ಪ್ರವೀಣಾ ಗ.ಹೆಗಡೆ ಗುಂಜಗೋಡು, ಆನಂದ ನಾಯ್ಕ ಕೊಂಡ್ಲಿ, ಮಂಜುನಾಥ ನಾಯ್ಕ ಹಾಳದಕಟ್ಟಾ, ಎಂ.ಎನ್. ಹೆಗಡೆ ಹಣಜೀಬೈಲ್, ಸುರೇಂದ್ರ ದಫೇದಾರ ಹೊಸೂರು, ಕುಮಾರ ನಾಯ್ಕ, ಪ.ಪಂ.ಮುಖ್ಯಾಧಿಕಾರಿ, ಅವರುಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಶಾ.ಮಂ. ಕೃಷ್ಣರಾವ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎನ್. ವಾಸರೆ ಅವರು ವಹಿಸಿ ಮಾತನಾಡಿ ಸಿದ್ದಾಪುರ ತಾಲೂಕು ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿದೆ, ಎಲ್ಲಾ ಗೋಷ್ಠಿಗಳ ಮೌಲ್ಯ ಉತ್ತಮವಾಗಿತ್ತು. ಇದೊಂದು ಅತ್ಯುತ್ತಮ ಸಮ್ಮೇಳನ ಎಂದು ಶ್ಲಾಘಿಸಿದರು. ಸನ್ಮಾನಿತರ ಪರವಾಗಿ ಸುರೇಂದ್ರ ದಫೇದಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿರ್ಣಯಗಳ ಮಂಡನೆಯನ್ನು ಅಣ್ಣಪ್ಪ ನಾಯ್ಕ ಶಿರಳಗಿ (ಕ.ಸಾ.ಪ. ತಾಲೂಕು ಘಟಕದ ಕಾರ್ಯದರ್ಶಿ) ಅವರು ಮಂಡಿಸಿದರು. ಉಷಾ ನಾಯ್ಕ ನಿರೂಪಿಸಿದರು, ಗೋಪಾಲ ನಾಯ್ಕ ಭಾಶಿ (ತಾಲೂಕು ಕ.ಸಾಪ. ಅಧ್ಯಕ್ಷ) ಅವರು ವಂದಿಸಿದರು.
ಸಮ್ಮೇಳನದ ನಿರ್ಣಯಗಳು…
1. ಕನ್ನಡ ಸಾರಸ್ವತ ಲೋಕದ ಅನೇಕ ಕೃತಿಗಳನ್ನು ಸಂಗ್ರಹಿಸಿಡಲು ಮತ್ತು ಓದುಗರಿಗೆ ಸೂಕ್ತ ಸ್ಥಳಾವಕಾಶ ಲಭ್ಯವಾಗುವಂತೆ ಸುಸಜ್ಜಿತವಾದ ಗ್ರಂಥಾಲಯ ಕಟ್ಟಡ ಕೂಡಲೇ ನಿರ್ಮಾಣವಾಗಬೇಕು. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತು ಸೂಕ್ತ ಅನುದಾನ ಲಭಿಸುವಂತೆ ಆಗಬೇಕು. ಸೂಚನೆ: ಜಿ. ಜಿ. ಹೆಗಡೆ ಬಾಳಗೋಡು, ಅನುಮೋದನೆ : ರತ್ನಾಕರ ನಾಯ್ಕ
2. ಸಿದ್ದಾಪುರವು ಕರ್ನಾಟಕದ ಎರಡನೇ ಬಾರ್ಡೋಲಿ ಎಂಬ ಚಾರಿತ್ರಿಕ ಅಭಿದಾನವನ್ನು ಹೊಂದಿದ್ದು, ಈ ನೆಲದಲ್ಲಿ ಸ್ವಾತಂತ್ರ್ಯ ಯೋಧರ ಸ್ಮಾರಕವಾಗಿ ಸ್ವಾತಂತ್ರ್ಯ ಸೌಧ ನಿರ್ಮಾಣವಾಗಲು ಅಗತ್ಯ ಕ್ರಮವನ್ನು ಸರಕಾರ ಕೈಗೊಳ್ಳಬೇಕು. – ಸೂಚನೆ : ಸುಜಾತಾ ದಂಟಕಲ್, ಅನುಮೋದನೆ : ಅಣ್ಣಪ್ಪ ಶಿರಳಗಿ.
3. ತಾಳಗುಪ್ಪಾದವರೆಗೆ ಬರುತ್ತಿರುವ ರೇಲ್ವೇ ಮಾರ್ಗದ ವಿಸ್ತರಣೆ ಸಿದ್ದಾಪುರದ ಮೂಲಕ ಹುಬ್ಬಳ್ಳಿಯವರೆಗೂ ಕೂಡುವಂತೆ ಆಗಿ ಈ ಭಾಗದ ಅಭಿವೃದ್ಧಿಗೆ ಅವಕಾಶ ದೊರೆಯುವಂತಾಗಬೇಕು. – ಸೂಚನೆ : ವಾಸುದೇವ ಬಿಳಗಿ, ಅನುಮೋದನೆ : ಎಂ. ಕೆ. ನಾಯ್ಕ ಹೊಸಳ್ಳಿ
4. ಸಿದ್ದಾಪುರದಲ್ಲಿ ಅತ್ಯಂತ ಅಗತ್ಯವಾದ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಹಾಗೂ ಕಟ್ಟಡ ನಿರ್ಮಾಣಗೊಳ್ಳಲು ಅಗತ್ಯವುಳ್ಳ ಅನುದಾನ ಸರ್ಕಾರ ಮತ್ತು ಸಾಹಿತ್ಯಪರಿಷತ್ತಿನ ಕೇಂದ್ರ ಕಚೇರಿಯ ಅನುಮತಿಯೊಂದಿಗೆ ಕಾರ್ಯಗತಗೊಳ್ಳಬೇಕು. – ಸೂಚನೆ : ಗೋಪಾಲ ಕೆ. ನಾಯ್ಕ ಭಾಶಿ ಅನುಮೋದನೆ : ತಮ್ಮಣ್ಣ ಬೀಗಾರ.
5. ರಾಜ್ಯದ ಬಹುತೇಕ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮುಚ್ಚದಂತೆ ಸರ್ಕಾರದಿಂದ ಅಗತ್ಯವಾದ ಕ್ರಮ ಅತ್ಯಂತ ಅಗತ್ಯ. – ಸೂಚನೆ : ರತ್ನಾಕರ ಪಾಲೇಕರ ಅನುಮೋದನೆ : ಉಷಾ ಪ್ರಶಾಂತ ನಾಯ್ಕ
6. ತಾಲೂಕಿನ ಮಾವಿನಗುಂಡಿಯಲ್ಲಿ ಒಂದು ತಿಂಗಳ ಕಾಲ ನಡೆದಿರುವ ಸ್ವಾತಂತ್ರ್ಯ ಹೋರಾಟ ಕಾಲದ ಮಹಿಳಾ ಸತ್ಯಾಗ್ರಹ ದೇಶಕ್ಕೆ ಒಂದು ಮಾದರಿ. ಆ ಸ್ಥಳದಲ್ಲಿ ಮಹಿಳಾ ಸ್ವಾತಂತ್ರö್ಯ ಹೋರಾಟಗಾರರ ಸ್ಮರಣೆಯಲ್ಲಿ ಒಂದು ಭವ್ಯವಾದ ಸ್ವಾಗತ ಫಲಕ ನಿರ್ಮಾಣಗೊಳ್ಳಬೇಕು. – ಸೂಚನೆ : ಚಂದ್ರಶೇಖರ ಕುಂಬ್ರಿಗದ್ದೆ, ಅನುಮೋದನೆ : ಟಿ.ಕೆ.ಎಂ. ಅಜಾದ್
7. ಸಿದ್ದಾಪುರದಲ್ಲಿ ಅಗತ್ಯವುಳ್ಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಬಸ್ ಡಿಪೋ ನಿರ್ಮಾಣವಾಗಿ ಪ್ರತಿ ಹಳ್ಳಿಗೂ ಬಸ್‌ನ ಸೌಕರ್ಯ ಆಗುವಂತೆ ಆಗ್ರಹವಿದೆ. – ಸೂಚನೆ : ಪ್ರಶಾಂತ ಶೇಟ್, ಅನುಮೋದನೆ : ಸುಮಿತ್ರಾ ಶೇಟ್.