ಯಲ್ಲಾಪುರ: ಪಟ್ಟಣದ ಎಪಿಎಂಸಿ ಯಾರ್ಡ್’ನಲ್ಲಿನ ಟಿಎಸ್ಎಸ್ ಸೂಪರ್ ಮಾರ್ಕೆಟ್’ನಲ್ಲಿನ ನೂತನ ಆಭರಣ ಮಳಿಗೆಯನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶನಿವಾರ ಸಂಜೆ ಉದ್ಘಾಟಿಸಿದರು.
ಉದ್ಘಾಟನೆಗೂ ಮುನ್ನ ಸೂಪರ್ ಮಾರ್ಕೆಟ್’ನ ಎಲ್ಲ ವಿಭಾಗಗಳನ್ನು ವೀಕ್ಷಿಸಿ ಶುಭ ಹಾರೈಸಿದರು. ಆಭರಣ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಂದ ರೈತರಿಗೋಸ್ಕರವಾಗಿರುವ ಟಿಎಸ್ಎಸ್ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡುವಂತಾಗಲಿ. ಅಂದಿನ ಕಾಲದಲ್ಲೇ ಇಂತಹ ಸಂಸ್ಥೆಗೆ ಅಡಿಗಲ್ಲನ್ನು ಹಾಕಿದ ದಿ.ಶ್ರೀಪಾದ ಹೆಗಡೆ ಕಡವೆ ಅವರ ಅವಿರತ ಶ್ರಮದ ಫಲಶೃತಿಯು ನಮ್ಮ ಮುಂದಿದ್ದು ಅದನ್ನು ನಾವು ಮುನ್ನಡೆಸಬೇಕಿದೆ. ಇದಕ್ಕೆ ರೈತರ ಬೆಂಬಲದಷ್ಟೇ ಸಿಬ್ಬಂದಿಗಳ ಸಹಕಾರವೂ ಅಷ್ಟೇ ಮುಖ್ಯವಾಗಿದೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಬೇಕು. ಗ್ರಾಹಕರಿಗೂ ಹೊರೆಯಾಗದಂತೆ ಸಂಸ್ಥೆಗೂ ನಷ್ಟವಾಗದಂತೆ ವ್ಯವಹರಿಸಬೇಕು.ಸಂಸ್ಥೆಯು ಸಿಬ್ಬಂದಿಗಳ ಕಾಳಜಿ ವಹಿಸುವಂತೆ,ಸಿಬ್ಬಂದಿಗಳೂ ಸಂಸ್ಥೆಯ ಏಳಿಗೆ ಬಯಸಿ ಪ್ರಾಮಾಣಿಕ ಸೇವೆ ನೀಡಿ ಸಂಸ್ಥೆಯನ್ನು ಉನ್ನತಮಟ್ಟಕ್ಕೇರಿಸಲು ಕೆಲಸ ಮಾಡಿ ಎಂದು ಕಿವಿಮಾತುಗಳನ್ನಾಡಿದರು. ನಂತರ ಟಿಎಸ್ಎಸ್ ಸಂಸ್ಥೆಯ ವತಿಯಿಂದ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ವಿಜಯಾನಂದ ಭಟ್, ವಿನಾಯಕ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಲಕ್ಕಿ ಡಿಪ್ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.