ಕುಮಟಾ: ಶ್ರೀರಾಮ ಮತ್ತು ಶ್ರೀರಾಮಚರಿತ ಮಾನಸಗಳನ್ನು ಅವಮಾನಿಸುವವರನ್ನು ಕೂಡಲೇ ಬಂಧಿಸುವoತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿವಾದಿತ ಲೇಖಕ ಕೆ. ಎಸ್. ಭಗವಾನ್ ಮತ್ತು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಕಿಡಿಕಾರಿದರು. ಲೇಖಕ ಕೆ. ಎಸ್. ಭಗವಾನ್ ಅವರು, ಭಗವಾನ್ ಶ್ರೀರಾಮನು ತನ್ನ ಪತ್ನಿ ಸೀತೆಯೊಂದಿಗೆ ದಿನವಿಡೀ ಮದ್ಯ ಸೇವಿಸುತ್ತಿದ್ದನು. ರಾಮ ಆದರ್ಶ ರಾಜನಲ್ಲ' ಎಂದು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆಯೂ ಭಗವಾನ್ ಇದೇ ರೀತಿಯ ಹೇಳಿಕೆ ನೀಡಿದ್ದರು ಮತ್ತು ರಾಜ್ಯದ ಹಲವು ಕಡೆ ಪ್ರಕರಣ ದಾಖಲಾಗಿತ್ತು.
ಇನ್ನು ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದಿಲ್ಲ’ ಎಂಬ ಷರತ್ತನ್ನು ವಿಧಿಸಲಾಗಿತ್ತು. ಈ ಷರತ್ತನ್ನು ಉಲ್ಲಂಘಿಸಿರುವ ಅವರ ಜಾಮೀನು ರದ್ದುಗೊಳಿಸಬೇಕು ಮತ್ತು ಅವರನ್ನು ತಕ್ಷಣ ಬಂಧಿಸಬೇಕೆoದು ನಾವು ಕರ್ನಾಟಕ ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಉತ್ತರಕನ್ನಡ ಜಿಲ್ಲಾ ಸಮನ್ವಯಕರಾದ ಶರತ್ ಕುಮಾರ್ ನಾಯ್ಕ್ ಎಚ್ಚರಿಸಿದರು.
ಅಲ್ಲದೇ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ಸಂತ ತುಳಸಿದಾಸರು ಬರೆದ ಶ್ರೀ ರಾಮಚರಿತಮಾನಸವನ್ನು ದ್ವೇಷ ಹುಟ್ಟಿಸುವ ಗ್ರಂಥ ಎಂದು ಹೇಳಿದರೆ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು
ಶ್ರೀ ರಾಮಚರಿತಮಾನಸ’ನಲ್ಲಿನ ದೋಹಾಗಳನ್ನು ನಿಷೇಧಿಸಬೇಕು. ಈ ಗ್ರಂಥಗಳನ್ನು ಮುಟ್ಟುಗೋಲು ಹಾಕಿ ನಾಶ ಮಾಡಬೇಕು ಎಂದು ಹೇಳಿಕೆ ನೀಡಿದ್ದು ಹಿಂದೂ ಜನಜಾಗೃತಿ ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಇಬ್ಬರನ್ನೂ ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಮನವಿಯನ್ನು ತಹಸೀಲ್ದಾರ್ ವಿವೇಕ ಶೇಣ್ವಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ ಅವರು ಈ ಮನವಿಯನ್ನು ರವಾನಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಬಿ ಜೆ ಪಿ ಯ ಮಂಡಲಾಧ್ಯಕ್ಷ ಹೇಮಂತ್ ಗಾವಕರ್, ಪ್ರಮುಖರಾದ ರಾಮದಾಸ ಗುನಗಿ, ರಾಧಾಕೃಷ್ಣ ಪೈ, ವಿಶ್ವ ಹಿಂದೂ ಪರಿಷತ್ತಿನ ಎಂ ಆರ್ ಭಟ್ , ತುಳುಸು ಗೌಡ, ಅಶೋಕ್ ಆಚಾರಿ, ಚೈತನ್ಯ ಆಚಾರಿ, ದೀಪಕ್ ಆಚಾರಿ, ವಿಠ್ಠಲ್ ಗುನಗಿ, ಸಂದೀಪ್ ಭಂಡಾರಿ, ಅರುಣ್ ನಾಯ್ಕ್ ಮಿರ್ಜಾನ್, ಸನಾತನ ಸಂಸ್ಥೆಯ ಗೀತಾ ಶಾನಭಾಗ, ಅನುರಾಧ ಪ್ರಭು, ದುರ್ಗಿ ಮುಕ್ರಿ ಇತರರು ಇದ್ದರು.