Slide
Slide
Slide
previous arrow
next arrow

ಉಪದ್ರವ ನೀಡುವವರಾಗದೇ, ರಕ್ತದಾನ ಮಾಡಿ ಉಪಕಾರಿಯಾಗಿ- ಡಾ.ರವಿಕಿರಣ ಪಟವರ್ಧನ್

300x250 AD

ಶಿರಸಿ:‌ ರಕ್ತದಾನ‌ ಎನ್ನುವುದು ಯಾರು ಏನು ಎನ್ನದೆ , ಯಾವುದೇ ಪ್ರತಿಫಲಾಕ್ಷೆ  ಇಲ್ಲದೆ ಮಾಡುವ ಶ್ರೇಷ್ಠ ದಾನವಾಗಿದೆ. ನಮ್ಮ ಅವಯವಗಳನ್ನು ಸತ್ತ ಮೇಲೆ ದಾನ ಮಾಡಲಾಗುತ್ತದೆ. ಆದರೆ ರಕ್ತದಾನ ಎನ್ನುವುದು ಜೀವಂತಿಕೆ ಇರುವಾಗ ಮಾಡಬಹುದಾದ ಮಹತ್ತರ ದಾನವಾಗಿದೆ. 18ನೇ ವರ್ಷ ಎನ್ನುವುದು ರಕ್ತದಾನ ಮಾಡಲು ಅರ್ಹತೆ ಸಿಗುವ ವಯಸ್ಸಾಗಿದ್ದು, ರಕ್ತದಾನ ಮಾಡುವುದರಿಂದ ರಕ್ತವನ್ನು ಪಡೆದುಕೊಂಡವರ ಜೀವ ಉಳಿದರೆ,  ರಕ್ತದಾನ ಮಾಡಿದವರ ಆರೋಗ್ಯ ವೃದ್ಧಿಯಾಗುತ್ತದೆ. ಎಂದು ಆಯುರ್ವೇದ ತಜ್ಞವೈದ್ಯ, ಬರಹಗಾರ, ಚಿಂತಕ ಡಾ.ರವಿಕಿರಣ್ ಪಟವರ್ಧನ್ ಹೇಳಿದರು. 

ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್, ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ  ‘ರಕ್ತದಾನದ ಮಹತ್ವ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

 ರಕ್ತದಾನವನ್ನು 18 ರಿಂದ 60 ವರ್ಷದವರೆಗೂ ಮಾಡಬಹುದಾಗಿದೆ. ಕನಿಷ್ಠ 45 ಕಿಲೋ ಗಿಂತ ಹೆಚ್ಚಿನ ತೂಕವಿರಬೇಕು. ಹಿಮೋಗ್ಲೋಬಿನ್ ಪ್ರಮಾಣ 12.05  ಪ್ರಮಾಣದಲ್ಲಿರಬೇಕು. ಅದಕ್ಕಾಗಿ ಆಲೆಮನೆ ಬೆಲ್ಲ, ಬೀಟ್ರೂಟ್, ಪಾಲಕ್ ಸೊಪ್ಪು, ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ.  ದೇಶದಲ್ಲಿ ತೀವ್ರಗತಿಯಲ್ಲಿ ಜನಸಂಖ್ಯೆ ಏರುತ್ತಿದೆ. ಆದರೆ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಿದೆ. ಮದ್ಯಪಾನ, ತಂಬಾಕು, ಧೂಮಪಾನ, ಗಾಂಜಾ,  ಇಂತಹ ದುಷ್ಟಟಗಳಿಗೆ ಸಮಾಜ ಬಲಿಯಾಗುತ್ತಿದ್ದು,  ರಕ್ತದಾನ ಮಾಡಲು ಅನರ್ಹರಾಗಿದ್ದಾರೆ. ಸಮಾಜಕ್ಕೆ ಯಾವುದೇ ಉಪದ್ರವ ಮಾಡದೇ ಒಮ್ಮೆಯಾದರೂ ಉಪಕಾರ ಮಾಡುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದರು.

 ಅಪಘಾತ ಮತ್ತು ಪ್ರಸವ ಸಮಯದಲ್ಲಿ ಮಾಡುವ ರಕ್ತದಾನ ಶ್ರೇಷ್ಠವಾಗಿರುತ್ತದೆ. ಹೆರಿಗೆ ಸಮಯದಲ್ಲಿ ಮಾಡುವ ರಕ್ತದಾನದಿಂದ ಎರಡು ಜೀವಗಳನ್ನು ಉಳಿಸಬಹುದು. ಇಂದಿನ ದಿನಮಾನಗಳಲ್ಲಿ ರಕ್ತದಾನ ಮಾಡಲು ಯುವ ಸಮೂಹ ಹಿಂದೇಟು ಹಾಕುತ್ತಿದೆ.  ರಕ್ತದಾನ ಸಮಯದಲ್ಲಿ 350 ಎಂಎಲ್’ನಷ್ಟು ಮಾತ್ರ  ರಕ್ತವನ್ನು ತೆಗೆಯಲಾಗುತ್ತದೆ. 120 ದಿನಗಳ ನಂತರ ನಮ್ಮ ದೇಹದಲ್ಲಿನ ರಕ್ತ ಜೀವಕೋಶಗಳು ನಾಶವಾಗುತ್ತವೆ. ಅದರ ಬದಲು ರಕ್ತದಾನವನ್ನು ಮಾಡಿ ಪರರ ಜೀವ ಉಳಿಸಬಹುದು. ಅಲ್ಲದೆ ಇದರಿಂದ ನೆನಪಿನ ಶಕ್ತಿಯು ವೃದ್ಧಿಸುತ್ತದೆ. ಡಯಾಬಿಟಿಸ್, ರಕ್ತದ ಒತ್ತಡ, ಇತ್ಯಾದಿ ಕಾಯಿಲೆಯಿಂದ ಬಳಲುತ್ತಿರುವವರು ರಕ್ತದಾನ ಮಾಡಲು ಸಾಧ್ಯವಿಲ್ಲ. ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದ್ದು ಯುವಕರು ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.    

  ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಮಾತನಾಡಿ, ರಕ್ತದಾನ ಮಾಡುವುದರಿಂದ ರಕ್ತ ಕಡಿಮೆಯಾಗುವುದಿಲ್ಲ. ಹೊಸ ರಕ್ತಕಣ ಉತ್ಪತ್ತಿಯಾಗಿ ರಕ್ತ ಹೆಚ್ಚಾಗುತ್ತದೆ. ಒಂದು ಕಾಲದಲ್ಲಿ ಅನ್ನದಾನ, ವಿದ್ಯಾದಾನ ಶ್ರೇಷ್ಠವಾಗಿದ್ದವು.  ಇಂದಿನ ಕಾಲಘಟ್ಟದಲ್ಲಿ ರಕ್ತದಾನವು ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮನಸ್ಥಿತಿ ಎಲ್ಲರಲ್ಲೂ ಜಾಗೃತವಾಗಬೇಕು ಎಂದು ಹೇಳಿದರು.   

300x250 AD

 ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಟಿ. ಭಟ್ ಸ್ವಾಗತಿಸಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡುತ್ತಾ, 1999 -2000  ದಶಕದಲ್ಲಿ ಎನ್.ಎಸ್.ಎಸ್ ಆಫೀಸರ್ ಆಗಿದ್ದಾಗ 2001 ಅಕ್ಟೋಬರ್ 2ರಂದು ಮೊದಲ ಬಾರಿಗೆ ನಗರದ ಸಾಮ್ರಾಟ್ ಹೋಟೆಲ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರ ಕುರಿತು ತಿಳಿಸಿದರು.  ರಕ್ತದಾನ ಇದು ಸಾಮಾನ್ಯವಾದ ಕೆಲಸವಲ್ಲ.  ಈ ಕೆಲಸವನ್ನು ರವಿ ಹೆಗಡೆ ಮುಂದುವರೆಸಿಕೊಂಡು ಹೋಗುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ರಕ್ತದಾನಿಗಳ ಗುಂಪು ಶಿರಸಿಯಲ್ಲಿ ಈಗ ಕಂಡು ಬರುತ್ತಿದ್ದು ಇದು ಹೆಮ್ಮೆಯ ಸಂಗತಿ ಎಂದರು.     

ಇದೇ ಸಂದರ್ಭ ಡಾ.ರವಿಕಿರಣ್ ಪಟವರ್ಧನ್ ಹಾಗೂ ರಕ್ತದಾನಿ ರವಿ ಹೆಗಡೆಯವರನ್ನು ಸನ್ಮಾನಿಸಲಾಯಿತು.

  ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ. ರಾಘವೇಂದ್ರ ಜಾಜಿಗುಡ್ಡೆ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಆರ್.ಆರ್. ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top