ಸಿದ್ದಾಪುರ: ವಿಧಾನಸಭಾಧ್ಯಕ್ಷರು, ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಶಿರಸಿಯಲ್ಲಿ ಅದ್ಧೂರಿಯಾಗಿ ಸನ್ಮಾನ ಸಮಾರಂಭ ಏರ್ಪಡಿಸಿರುವುದು ಸಂತೋಷ, ಸ್ವಾಗತಾರ್ಹವಾದ ವಿಷಯವಾಗಿದೆ. ಒಬ್ಬ ಶಾಸಕರಾಗಿ ತಮ್ಮ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳಾದರೂ ಕೆಲವು ಪೂರ್ಣಗೊಳ್ಳದೇ ಹಳ್ಳ ಹಿಡಿದಿದ್ದು, ಮತದಾರರಾದ ಕ್ಷೇತ್ರದ ಜನತೆಗೆ ಅವಮಾನವಾದಂತಾಗಿದೆ ಜೆಡಿಎಸ್ ಯುವ ಮುಖಂಡ ಇಲಿಯಾಸ್ ಸಾಬ್ ಆರೋಪಿಸಿದ್ದಾರೆ.
ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಕುಡಿಯುವ ನೀರಿನ ಯೋಜನೆ ಶರಾವತಿಯಿಂದ 93 ಕೋಟಿ ಮಂಜೂರಿಯಾಗಿರುವ ಮಾಧ್ಯಮಗಳಲ್ಲಿ ಬಂದಿದೆ ವಿನಃ ಕೆಲಸವಾಗಿಲ್ಲ. ಚತುಷ್ಪಥ ರಸ್ತೆ ಅಗಲೀಕರಣದಲ್ಲಿ ತಾರತಮ್ಯವಾಗಿ ಬಡವರಿಗೆ ಮತ್ತು ಶ್ರೀಮಂತರಿಗೆ ಒಂದು ನ್ಯಾಯ ಎಂಬಂತಾಗಿದೆ. ಅರಣ್ಯ ಮತ್ತು ವಾಸವಿರುವ ಅತಿಕ್ರಮಣದಾರರ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ತಾಲೂಕಿನಲ್ಲಿ 15- 20 ವರ್ಷದಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ವರ್ಗಾವಣೆಇಲ್ಲ. ತಾಲೂಕಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದಾರೆ.
ಸೈನಿಕರಿಗೆ ಸ್ಮಾರಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಈಗಾಗಲೇ 3 ವರ್ಷ ಕಳೆದಿದೆ. ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ತಾಲೂಕಾ ಕ್ರೀಡಾಂಗಣದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ತಾಲೂಕಿನಾದ್ಯಂತ ದನಕರುಗಳಿಗೆ ರೋಗ ಬಂದು ಅವು ಸಾಯುತ್ತಿವೆ. ಪಶುಸಂಗೋಪನಾ ವೈದ್ಯಾಧಿಕಾರಿಗಳಿಗೆ ಅದರ ಬಗ್ಗೆ ಕಿಂಚಿತ್ತು ಗಮನ ಇಲ್ಲ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳ ಕೊರತೆಯಿಂದ ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವಾಗಿದ್ದು, ಸರಕಾರಿ ಶಾಲೆಗಳು ಬೀಳುವ ಸ್ಥಿತಿಯಲ್ಲಿವೆ. ರಸ್ತೆಯಲ್ಲಿ ನಿಂತು ಸರಾಯಿ ಕುಡಿಯಲು ಅನುವು ಮಾಡಿಕೊಟ್ಟ ಮಾಲಿಕ, 1978 ಹಂಗಾಮಿ ಭೂಮಿಯನ್ನು ಹಕ್ಕು ಪತ್ರ ನೀಡದೆ ಸತಾಯಿಸಿದ ಅಧಿಕಾರಿಗಳು ಮತ್ತು ಹಣ ಬೇಡಿಕೆ, ಅಕ್ರಮ ಮರಳುಗಾರಿಕೆಯಿಂದ ಬೀದಿಗೆ ಬಂದ ತಾಲೂಕು ವಾಹನ ಚಾಲಕರು ಮತ್ತು ಮಾಲಿಕರು. ತಾಳಗುಪ್ಪ- ಸಿದ್ದಾಪುರ ರೈಲು ಮಾರ್ಗ ಇಲ್ಲಿಯವರೆಗೂ ನಿರ್ಮಾಣಗೊಂಡಿಲ್ಲ. ಕ್ಷೇತ್ರದ ಉದ್ಧಾರವಿಲ್ಲದ್ದಕ್ಕೆ ಮತ್ತೆ ಸನ್ಮಾನ ಯಾತಕ್ಕೆ? ಎಂದು ಪ್ರಶ್ನಿಸಿದ್ದಾರೆ.