ಕಾರವಾರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊoಡಿರುವ ಐತಿಹಾಸಿಕ ಸದಾಶಿವಗಡ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಗುಡ್ಡದಲ್ಲಿ ಬೆಳೆದಿದ್ದ ಒಣಹುಲ್ಲಿಗೆ ಬೆಂಕಿ ತಗುಲಿ ಗಿಡಗಳಿಗೂ ವ್ಯಾಪಿಸಿದೆ. ಗುಡ್ಡಕ್ಕೆ ಬೆಂಕಿ ಬಿದ್ದಿರುವುದನ್ನ ಗಮನಿಸಿದ ವಾಹನ ಸವಾರರು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಗುಡ್ಡದ ಮೇಲೆ ವಾಹನ ಕೊಂಡೊಯ್ಯುವುದು ಸಾಧ್ಯವಿಲ್ಲದ ಹಿನ್ನಲೆ ಅಗ್ನಿಶಾಮಕ ಸಿಬ್ಬಂದಿ ಹೆದ್ದಾರಿ ಮೇಲೆ ನಿಂತು ನೀರು ಹರಿಸುವ ಮೂಲಕ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಗುಡ್ಡದ ಮೇಲ್ಭಾಗದಲ್ಲಿ ಜಂಗಲ್ ಲಾಡ್ಜಸ್‌ನವರ ರೆಸಾರ್ಟ್ ಹಾಗೂ ದುರ್ಗಾದೇವಿ ದೇವಸ್ಥಾನವಿದ್ದು, ಗುಡ್ಡದ ಕೆಳಭಾಗದಲ್ಲೇ ಹೆದ್ದಾರಿ ಹಾದುಹೋಗುತ್ತದೆ. ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಓಡಾಟ ನಡೆಸುವುದರಿಂದ ಇದೀಗ ಬೆಂಕಿ ಕಾಣಿಸಿಕೊಂಡಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿತು. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಯಾರೋ ಕಿಡಿಗೇಡಿಗಳು ಸಿಗರೇಟ್ ಸೇದು ಎಸೆದ ಪರಿಣಾಮ ಬೆಂಕಿ ತಗುಲಿದೆ ಎನ್ನಲಾಗಿದ್ದು, ಸ್ಥಳಕ್ಕೆ ಚಿತ್ತಾಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.