ಹೊನ್ನಾವರ: ಕರಾವಳಿ ಕಾವಲುಪಡೆಯ ವತಿಯಿಂದ ‘ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆ ಸಪ್ತಾಹ’ ಕಾರ್ಯಕ್ರಮ ತಾಲೂಕಿನ ಇಕೋ ಬೀಚ್ ಆವಾರದಲ್ಲಿ ಜರುಗಿತು.
ಡಿ.27ರಿಂದ 31ರವರೆಗೆ ಕಡಲಕಿನಾರೆ ಸಪ್ತಾಹದ ಅಂಗವಾಗಿ ಕಾಸರಕೋಡ ಇಕೋ ಬಿಚ್ ಸುತ್ತ ಮುತ್ತಲಿನ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು. ಸ್ವಚತಾ ಕಾರ್ಯಕ್ರಮ ನೇರವೇರಿಸಿದ ಬಳಿಕ ಕರಾವಳಿ ಕಾವಲುಪಡೆಯ ಪೊಲೀಸ್ ನಿರೀಕ್ಷಕ ಮುರುಗೇಶ ಟಿ.ಎಸ್. ಮಾತನಾಡಿ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಈ ಕಾರ್ಯಕ್ರಮದ ಮೂಲಕ ಕಸವನ್ನು ಎಲ್ಲಡೆ ಹಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಿಪಿಐ ಶ್ರೀಧರ ಎಸ್.ಆರ್. ಮಾತನಾಡಿ, ಸಿಬ್ಬಂದಿಯನ್ನು ಎಲ್ಲೆಡೆ ನೇಮಿಸಿ ನಿಗಾ ವಹಿಸಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಜನರು ಜಾಗೃತರಾದಾಗ ಮಾತ್ರ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೋರ್ವರು ತಮ್ಮ ಜವಾಬ್ದಾರಿ ಅರಿತು ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮಂಜು ಗೌಡ, ಸದಸ್ಯ ಭಾಷಾ ಸಾಬ್, ಪಿಡಿಓ ನಾಗರಾಜ, ಕರಾವಳಿ ಕಾವಲು ಪಡೆಯ ಅಶೋಕ ಸಿ.ಎಮ್., ಡಿ.ಕೆ.ನಾಯ್ಕ, ರಮೇಶ ಖಾರ್ವಿ, ಜನತಾ ವಿದ್ಯಾಲಯದ ಶಿಕ್ಷಕರು, ನ್ಯೂ ಇಂಗ್ಲಿಷ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.