ಅಂಕೋಲಾ: ರಾಜ್ಯದಾದ್ಯಂತ ಕ್ವಾರಿ ಮತ್ತು ಕ್ರಷರ್ ಬಂದ್ ಮಾಡಿ ನಡೆಸುತ್ತಿರುವ ಹೋರಾಟಕ್ಕೆ ಉತ್ತರ ಕನ್ನಡ ಜಿಲ್ಲಾ ಕ್ವಾರಿ ಮತ್ತು ಕ್ರಷರ್ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ.
ಕ್ವಾರಿ ಮತ್ತು ಕ್ರಷರ್ ಮಾಲೀಕರ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿರುವ ಅವೈಜ್ಞಾನಿಕ ದಂಡ, ಅಧಿಕ ತೆರಿಗೆಯನ್ನ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಯನ್ನ ಮುಂದಿಟ್ಟುಕೊಂಡು ರಾಜ್ಯ ಸಂಘ ರಾಜ್ಯದ್ಯಂತ ಕ್ವಾರಿ ಹಾಗೂ ಕ್ರಷರ್ಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ.
ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಸಭೆ ನಡೆಸಿದ ಜಿಲ್ಲಾ ಸಂಘದ ಸದಸ್ಯರು ಸರ್ಕಾರದ ನಿಲುವಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯವರು ಬೆಂಬಲ ಕೊಡಲು ನಿರ್ಧರಿಸಿದ್ದಲ್ಲದೇ, ಡಿ.28ರಂದು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುವ ಹೋರಾಕ್ಕೆ ಬೆಂಬಲವನ್ನು ನೀಡಿದರು.
ಕ್ವಾರಿ ಹಾಗೂ ಕ್ರಷರ್ಗಳ ಚಟುವಟಿಕೆ ಬಂದ್ ಆದರೆ ಜಿಲ್ಲೆಯಲ್ಲಿ ಮನೆ ನಿರ್ಮಾಣ ಸೇರಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕಷ್ಟು ಹಿನ್ನಡೆಯಾಗಲಿದೆ. ಈಗಾಗಲೇ ರಾಜ್ಯದಲ್ಲಿ ಎಲ್ಲಾ ಕಡೆ ಬಂದ್ ಇದ್ದು, ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬಿದ್ದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ವಾರಿ ಮತ್ತು ಕ್ರಷರ್ ಮಾಲಿಕರ ಮನವಿಗೆ ಸ್ಪಂದಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಜಿ.ಕೆ ಶಿವಪ್ರಸಾದ್, ಮಂಗಲದಾಸ ಕಾಮತ್, ತುಳಸಿದಾಸ ಕಾಮತ್, ಅಶೋಕ್ ಶೇಟ್, ಡಿ.ಎನ್ ನಾಯಕ, ರಾಜು ಶೆಟ್ಟಿ, ಜಿ.ಎಂ ನಾಯಕ, ಶಾಂತ ನಾಯಕ, ಡಿ.ಕೆ.ನಾಯ್ಕ ಸೇರಿದಂತೆ ಹಲವರು ಇದ್ದರು.