ಕಾರವಾರ: ಸ್ಥಳೀಯರಿಗೆ ಉದ್ಯೋಗ ನೀಡದೇ ಅನ್ಯಾಯ ಎಸಗುತ್ತಿರುವುದನ್ನು ವಿರೋಧಿಸಿ ನೌಕಾನೆಲೆ ಕಂಪೆನಿಗಳ ವಿರುದ್ಧ ವಿವಿಧ ಸಂಘಟನೆಗಳೊಂದಿಗೆ ಹೊರಗುತ್ತಿಗೆ ನೌಕರರು ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ಕಾಮಗಾರಿ ಗೇಟ್ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಸ್ಥಳೀಯರಿಗೆ ಉದ್ಯೋಗಾವಕಾಶ, ಹೊರಗುತ್ತಿಗೆ ಕಾರ್ಮಿಕರಿಗೆ ಪಿಎಫ್, ಇಎಸ್ಐ ಹಾಗೂ ವಾರದ ರಜೆ ನೀಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ನೌಕಾನೆಲೆ ಗುತ್ತಿಗೆ ಕಂಪೆನಿಗಳ ವಿರುದ್ಧ ಘೋಷಣೆ ಕೂಗಿದರು. ನೌಕಾನೆಲೆಯ ಎರಡನೇಯ ಹಂತದ ಕಾಮಗಾರಿಯ ಗುತ್ತಿಗೆಯನ್ನ ಹೊರರಾಜ್ಯದ ವಿವಿಧ ಕಂಪೆನಿಗಳು ಗುತ್ತಿಗೆ ಪಡೆದುಕೊಂಡಿದ್ದು, ತಮ್ಮದೇ ರಾಜ್ಯದ ಕಾರ್ಮಿಕರನ್ನೇ ಕೆಲಸಕ್ಕೆ ಬಳಸಿಕೊಳ್ಳುತ್ತಿವೆ. ಇದರಿಂದಾಗಿ ನೌಕಾನೆಲೆಗೆ ಜಾಗ ನೀಡಿ ನಿರಾಶ್ರಿತರಾಗಿರುವವರು ಹಾಗೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದ್ದು, ಕೆಲಸ ಸಿಗದೇ ಪರದಾಡುವಂತಾಗಿದೆ. ಅಲ್ಲದೇ ಸ್ಥಳೀಯ ಕಾರ್ಮಿಕರಿಗೆ ಕಾಮಗಾರಿಯ ಮೇಲ್ವಿಚಾರಕರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಇನ್ನು ಕಾರವಾರ- ಅಂಕೋಲಾದ ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಪ್ರೊಜೆಕ್ಟ್ ಆಫೀಸರ್ ಸಿಂಥಲ್ಕುಮಾರ್ ಎಂಬಾತನ ಪ್ರತಿಕೃತಿ ಇರಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.