ಹೊನ್ನಾವರ: ಈ ಹಿಂದೆ ಮನೆ, ಮಠ, ಮಂದಿರಗಳು ಸಂಸ್ಕಾರ ಕೊಡುತ್ತಿದ್ದವು. ಇದರಿಂದ ಭಾರತ ವಿಶ್ವಕ್ಕೆ ಗುರುಸ್ಥಾನದಲ್ಲಿತ್ತು. ಬ್ರಿಟೀಷರು ಇದನ್ನು ಹಾಳು ಮಾಡಲು ಮೆಕಾಲೆ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ತಾಲೂಕಿನ ಹೆರಂಗಡಿ ಕ್ಲಸ್ಟರ್ ಮಟ್ಟದ ಸ.ಹಿ.ಪ್ರಾ.ಶಾಲೆ ಜಲವಳಕರ್ಕಿಯ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಕೊಠಡಿ, ಧ್ವಜಸ್ತಂಭ, ನಲಿಕಲಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೆಕಾಲೆ ಶಿಕ್ಷಣ ನೀತಿ ಸ್ವಾವಲಂಬಿ ಶಿಕ್ಷಣವನ್ನು ಹಾಳು ಮಾಡಿದೆ. ಸಂಸ್ಕಾರದ ಶಿಕ್ಷಣ ಅಗತ್ಯವಿದೆ. ಸಮಾಜ ಮತ್ತು ದೇಶವನ್ನು ಅಭಿವೃದ್ಧಿಪಡಿಸಲು ಶಾಲೆ ಬಹುಮುಖ್ಯ ಪಾತ್ರ ವಹಿಸಲಿದೆ. ದೇಶದ ಪ್ರತಿಯೊಬ್ಬನಿಗೂ ಶಿಕ್ಷಣ ಸಿಗಬೇಕು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ವಶಿಕ್ಷಣ ಅಭಿಯಾನವನ್ನು ತಂದರು. ಪ್ರಧಾನಿ ನರೇಂದ್ರ ಮೋದಿಯವರು ಹೊಸ ಶಿಕ್ಷಣ ನೀತಿಯನ್ನು ತಂದು ಸ್ವಾವಲಂಬಿ ಶಿಕ್ಷಣ ತರಲು ಮುಂದಾಗಿದ್ದಾರೆ. ಶಿಕ್ಷಣಕ್ಕೆ ಬಿಜೆಪಿ ಹೆಚ್ಚಿನ ಒತ್ತುನೀಡುವ ಮೂಲಕ ಪ್ರೋತ್ಸಾಹಿಸಿದೆ. ಮುಂದಿನ ದಿನದಲ್ಲಿ ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ತಿಳಿಸಿದರು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿಕ್ಷಣ ಹಾಗೂ ಸಂಸ್ಕಾರ ಒಂದೆಡೆ ಸಿಗುವ ಶಾಲೆಯು ಸರಸ್ವತಿ ದೇಗುಲ. ಶಾಲಾ ಶತಮಾನೋತ್ಸವ ರಾಜ್ಯವೇ ಮಾದರಿಯಾಗುವ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದು ಯಾವುದೇ ಸರ್ಕಾರಿ, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿದೆ. ಯಾವಾಗಲು ಕಲಿತ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು. ಅಭಿಮಾನ ಎನ್ನುವುದು ಚೌಕಟ್ಟಿಗೆ ಸಿಮೀತವಾಗಿರದೆ, ವಸುದೈವ ಕುಟುಂಬ ಎನ್ನುವಂತೆ ಇತರರಿಗೂ ಪ್ರೇರಣೆ ನೀಡುವಂತಾಗಬೇಕು. ಶಿಕ್ಷಣದಲ್ಲಿ ಭಾರತೀಯ ದ್ರಷ್ಟಿಕೋನದ ಇತಿಹಾಸ ತಿಳಿಸುವಂತಹ ಶಿಕ್ಷಣ ಜಾರಿಗೆ ತರುವಂತಹ ಪ್ರಯತ್ನ ನಡೆಯುತ್ತಿದೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಯೋಜನೆ ಕಾರ್ಯರೂಪದಲ್ಲಿದ್ದು, ಅಲ್ಲಿಯ ವಿಷಯಗಳು ಜೀವನದ ಸಾರ್ಥಕತೆ ತೆರೆದುಕೊಡಲಿದೆ. ಪ್ರತಿ ಮನೆಗಳಲ್ಲಿ ಶಾಲೆಯಂತೆ ಯೋಗ್ಯ ಶಿಕ್ಷಣ ದೊರೆಯುವಂರಾಗಬೇಕಿದೆ. ಶಿಕ್ಷಣ ಎಂದರೆ ಕೇವಲ ಅಂಕ ಪಡೆಯುವುದು ಮಾತ್ರವಲ್ಲ, ಸಂಸ್ಕಾರದ ಗುಣ ಹೊಂದುವ ಶಿಕ್ಷಣವನ್ನು ಪಡೆಯಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ, ಇಂದು ಈ ಗ್ರಾಮದವರು ಸುವರ್ಣಾಕ್ಷರದಲ್ಲಿ ಬರೆದಿರುವ ದಿನವಾಗಿದೆ. ಶಿಕ್ಷಣ ಇಲಾಖೆಯ ಹಾಲಿ- ಮಾಜಿ ಸಚಿವರೀರ್ವರು ಒಂದೇ ವೇದಿಕೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅವಿಸ್ಮರಣೀಯವಾಗಿದೆ. ನನ್ನ ಕ್ಷೇತ್ರದಲ್ಲಿ ಈರ್ವರು ಸಚಿವರು ಶಾಲಾ ಕೊಠಡಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಲಾಗಿದೆ. ಮುಂದೆಯು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಶಾಲಾ ವಿದ್ಯಾರ್ಥಿಗಳ ‘ಜಲಧಿ’ ಹಸ್ತಪತ್ರಿಕೆ, ಶತಮಾನೋತ್ಸವ ಸ್ಮರಣಸಂಚಿಕೆ ‘ವಿದ್ಯಾ ಶರಾವತಿ’ಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರ ನಾಯ್ಕ ಸ್ವಾಗತಿಸಿ, ಪತ್ರಕರ್ತ ಎಂ.ಎನ್.ಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಗೌಡ, ತಹಶೀಲ್ದಾರ ನಾಗರಾಜ ನಾಯ್ಕಡ್, ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಸಾಹಿತಿ ಸುಮುಖಾನಂದ ಜಲವಳ್ಳಿ, ಶತಮಾನೊತ್ಸವ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಗ್ರಾ.ಪಂ.ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತಿತರು ಹಾಜರಿದ್ದರು.