ದಾಂಡೇಲಿ: ನಗರದ ಸಮೀಪದ ಹೊಸ ಕೊಣಪದಲ್ಲಿ ನರೇಗಾ ಯೋಜನೆಯಡಿಯಲ್ಲಿ 200 ಮೀ. ರಸ್ತೆ ದುರಸ್ತಿಯನ್ನು ಮಾಡಲಾಗಿದ್ದು, ಆದರೆ ಕಾಮಗಾರಿ ತೀವ್ರ ಕಳಪೆಯಾಗಿ ರಸ್ತೆ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಬುಧವಾರ ಕಳಪೆ ರಸ್ತೆ ಕಾಮಗಾರಿಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟ ಗುತ್ತಿಗೆದಾರನ ಮೇಲೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಸುನೀಲ ಕಾಂಬಳೆಯವರು ಸಹ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಾಗಿರುವುದರಿಂದ ಕಾಮಗಾರಿಯ ಬಿಲ್ಲನ್ನು ತಡೆಹಿಡಿಯಬೇಕೆಂದು ಮತ್ತು ರಸ್ತೆ ಕಾಮಗಾರಿ ಕಳಪೆಯಾಗಿದ್ದರೂ, ಅವೇಡಾ ಗ್ರಾಮ ಪಂಚಾಯತಿ ಪಿಡಿಓರವರು ಸಂಬಂಧಪಟ್ಟ ಗುತ್ತಿಗೆದಾರನಿಗೆ ಬಿಲ್ ಮಂಜೂರು ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಜಿಲ್ಲಾ ಪಂಚಾಯ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ, ತಾಲೂಕು ಪಂಚಾಯ್ತು ಕಾರ್ಯನಿರ್ವಾಹಣಾಧಿಕಾರಿಯವರಿಗೆ ಪತ್ರ ಬರೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹೊಸ ಕೊಣಪದ ಜನತೆಗೆ ಅಗತ್ಯವಾಗಿ ಬೇಕಾಗಿದ್ದ ರಸ್ತೆಯನ್ನು ಸಮರ್ಪಕವಾಗಿ ಮಾಡದಿರುವದರಿಂದ ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಅವೇಡಾ ಗ್ರಾಮ ಪಂಚಾಯತಿಯ ಅಧಿಕಾರಿಗಳು ಸ್ಥಳೀಯ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.