ಶಿರಸಿ: ಜನ್ಮಕೊಟ್ಟ ತಂದೆ-ತಾಯಿ, ಆಶ್ರಯಕೊಟ್ಟ ಭೂತಾಯಿ, ಜೀವನ ಪೂರ್ತಿ ಹಾಲು ನೀಡಿ ಪೋಷಿಸುವ ಗೋಮಾತೆ ಮತ್ತು ಸಮಾಜದ ಋಣ ತೀರಿಸುವ ಪ್ರಯತ್ನ ನಮ್ಮ ಬದುಕಿನ ಆದ್ಯತೆಯಾಗಲಿ ಎಂದು ಧಾರವಾಡ ಹಾಲು ಒಕ್ಕೂಟ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಹಾಗು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಹೇಳಿದರು.
ರಾಷ್ಟ್ರೀಯ ಹಾಲು ದಿನಾಚರಣೆ ಅಂಗವಾಗಿ ತಾಲೂಕಿನ ಗಿಡಮಾವಿನಕಟ್ಟೆಯಲ್ಲಿರುವ ಹಿರಿಯರ ಮನೆ ಸುಯೋಗಾಶ್ರಮದಲ್ಲಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೆತ್ತ ಮಕ್ಕಳೇ ಜನ್ಮದಾತರನ್ನು ನೋಡಿಕೊಳ್ಳದ ಪರಿಸ್ಥಿತಿಯಲ್ಲಿ ಈ ಸುಯೋಗಾಶ್ರಮದಲ್ಲಿರುವ ವೃದ್ಧರ ಆರೈಕೆಯನ್ನು ಮಾಡಿ, ಮಕ್ಕಳಂತೆ ಸಲಹುತ್ತಿರುವ ಲಥಿಕಾ ಭಟ್ಟರವರ ಕಾರ್ಯ ನಿಜಕ್ಕೂ ಅನುಕರಣೀಯ. ಮನುಷ್ಯ ಸ್ವಾರ್ಥಿಯಾಗಿ ಬದುಕಿದರೆ ಮನಸ್ಸಿಗೆ ಸಮಾಧಾನ ಸಿಗದು. ಮನಃಶಾಂತಿ ಇಲ್ಲದ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ನಮ್ಮಿಂದಾಗುವ ಎಲ್ಲ ಸಹಾಯ-ಸಹಕಾರ ಸುಯೋಗಾಶ್ರಮಕ್ಕೆ ನೀಡಲಿದ್ದೇವೆ ಎಂದರು.
ಪೂರ್ಣ ಬದುಕನ್ನು ಹೈನುಗಾರರ ಹಿತಕ್ಕೆ ಮೀಸಲಿಟ್ಟ ಡಾ.ಕುರಿಯನ್ ಅವರನ್ನು ಈ ದೇಶ ಸದಾ ಸ್ಮರಿಸುತ್ತದೆ. ಸಹಕಾರಿ ವ್ಯವಸ್ಥೆಯಲ್ಲಿ ಹಾಲು ಉತ್ಪಾದಕ ರೈತರನ್ನು ಕರೆತಂದು, ಅವರ ಬದುಕನ್ನು ಹಸನಗೊಳಿಸಿದ ಕೀರ್ತಿ ಕುರಿಯನ್ ಗೆ ಸಲ್ಲಬೇಕು. ಅದೇ ಸಹಕಾರಿ ವ್ಯವಸ್ಥೆಯ ಭಾಗವಾಗಿ ನಮ್ಮ ರಾಜ್ಯದಲ್ಲಿ ಕೆಎಂಎಫ್ ಕೆಲಸ ಮಾಡುತ್ತಿದೆ. ಇಂದು ನಾವು ಎಲ್ಲ ಹಾಲು ಉತ್ಪಾದಕ ರೈತರು ನಿಶ್ಚಿತ ಬೆಲೆಯಲ್ಲಿ ಸಮಾಧಾನದಿಂದ ಬದುಕುತ್ತಿದ್ದಲ್ಲಿ ಅದು ಕುರಿಯನ್ ಅವರ ಕಾರಣಕ್ಕಾಗಿದೆ. ರೈತರ ಬದುಕಿಗೆ ವಿಶ್ವಾಸವನ್ನು ಕೊಟ್ಟಿರುವ ಕುರಿಯನ್ ಬದುಕು ನಮ್ಮೆಲ್ಲರಿಗೂ ಆದರ್ಶ ಎಂದು ಅವರು ಹೇಳಿದರು.
ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್ ಮಾತನಾಡಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕಾರ್ಯ ಎಲ್ಲದಕ್ಕಿಂತ ದೊಡ್ಡದು. ವೃದ್ಧರ ಆರೈಕೆ ಮಾಡುವುದು ಸುಲಭದ ಮಾತಲ್ಲ. ತಾಳ್ಮೆ-ಸಹನೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿ ಇರಬೇಕು. ಆ ನಿಟ್ಟಿನಲ್ಲಿ ಲಥಿಕಾ ಭಟ್ಟರವರ ಕೆಲಸ ನಿಜಕ್ಕೂ ಸ್ಮರಣೀಯ ಎಂದರು.
ಸುಯೋಗಾಶ್ರಮದ ಮುಖ್ಯಸ್ಥರಾದ ಲಥಿಕಾ ಭಟ್ಟ ಮಾತನಾಡಿ, ಉದ್ದೇಶ ಒಳ್ಳೆಯದಿದ್ದಲ್ಲಿ ಒಳ್ಳೆಯ ಮನಸ್ಸುಗಳು ಸೇರಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ನೈಜ ಸಾಕ್ಷಿ. ಆಶ್ರಮದ ಆರಂಭದಲ್ಲಿ ಈ ಸ್ಥಳಕ್ಕೆ ಜನಕ್ಕಿಂತ ಹಸು ಬಂದಿತ್ತು. ಗೋಮಾತೆಯಲ್ಲಿ ನಾವು ಧನಾತ್ಮಕ ಶಕ್ತಿಯನ್ನು ಕಾಣಬಹುದು. 2012 ರಲ್ಲಿ 4 ಜನರಿಂದ ಆರಂಭವಾದ ನಮ್ಮ ಸುಯೋಗ ಆಶ್ರಮವು ಇಂದು 44 ವೃದ್ಧರನ್ನು ಆರೈಕೆಮಾಡಿಕೊಳ್ಳಲಾಗುತ್ತಿದೆ. ವೃದ್ಧಾಶ್ರಮ ಎಂದರೆ ಮೃತ್ಯು ಪಕ್ಕದಲ್ಲಿಯೇ ಇದ್ದಂತೆ. ಎಲ್ಲ ಸಹಕಾರಿಗಳ ಸಹಾಯದ ಕಾರಣದಿಂದ ಈ ಹಂತಕ್ಕೆ ಬಂದು ತಲುಪಿದ್ದೇವೆ. ಎಲ್ಲರ ಸಹಕಾರಕ್ಕೆ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.
ಸುಯೋಗಾಶ್ರಮದಲ್ಲಿನ ಎಲ್ಲ ವೃದ್ಧರಿಗೆ ಒಕ್ಕೂಟದ ವತಿಯಿಂದ ಹಾಲು-ಹಣ್ಣು ನೀಡಲಾಯಿತು. ವೇದಿಕೆಯಲ್ಲಿ ಹೀಪನಳ್ಳಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಶ್ರೀಧರ ಹೆಗಡೆ, ಹುಣಸೇಕೊಪ್ಪ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಎನ್.ಎನ್.ಹೆಗಡೆ, ಚಿಪಗಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ವಿದ್ಯಾಧರ ಚಿಪಗಿ ಇದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸಂಘಪ್ಪ ಅಸೂಟಿ, ಶರಣು ಮೆಣಸಿನಕಾಯಿ, ಬಸವರಾಜ ಸಾಲೋನಿ ಸೇರಿದಂತೆ ಇನ್ನಿತರರು ಇದ್ದರು.