ಸಿದ್ದಾಪುರ: ಸುಪ್ರಿಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಅರಣ್ಯವಾಸಿಗಳ ಪರವಾಗಿ ಪೂರ್ಣ ಪ್ರಮಾಣದ ಇಚ್ಛಾಶಕ್ತಿ ಪ್ರದರ್ಶಿಸಿ, ಅರಣ್ಯವಾಸಿಗಳು ಅತಂತ್ರವಾಗದಂತೆ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಿ ಎಂದು ಪಕ್ಷಾತೀತವಾಗಿ ಆಗ್ರಹ ಕೇಳಿಬಂದವು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸಿದ್ಧಾಪುರ ತಾಲೂಕಿನ, ಬೇಡ್ಕಣಿಯ ಶ್ರೀ ಕೋಟೆ ಹನುಮಂತ ಪ್ರತಿಷ್ಠಾನ ದೇವಾಲಯದ ಸಭಾಂಗಣದಲ್ಲಿ ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನದಲ್ಲಿ ಜರುಗಿದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಾಜ ರಾಮಾ ನಾಯ್ಕ ಬೇಡ್ಕಣಿ, ವಿ ಎನ್ ನಾಯ್ಕ ವಿಳನೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ ಕೆರಿಯಪ್ಪ ಮುಂತಾದವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ, ಕಾನೂನಿನ ಮೂಲ ತತ್ವಸಿದ್ದಾಂತಕ್ಕೆ ವ್ಯತಿರಿಕ್ತವಾಗಿ ಅರ್ಜಿಗಳು ತೀರಸ್ಕಾರವಾಗಿರುವುದಕ್ಕೆ ಜನಪ್ರತಿನಿಧಿಗಳೇ ಕಾರಣವೆಂದು ಆರೋಪಿಸಲಾಯಿತು.
ಸಭೆಯಲ್ಲಿ ನಾಗರಾಜ ಎಮ್ ನಾಯ್ಕ, ಕೆರಿಯಪ್ಪ ನಾಯ್ಕ, ಮಂಜು ತ್ಯಾರ್ಸಿ, ಬಾಬು ನಾಯ್ಕ, ಗೋವಿಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಸ್ತಾವನೆ ಮಾಭ್ಲೇಶ್ವರ ಎಮ್ ನಾಯ್ಕ ಬೇಡ್ಕಣಿ ನಿರ್ವಹಿಸಿದರು. ವಂದನಾರ್ಪಣೆಯನ್ನು ಕಾರ್ಯಕ್ರಮ ಸಂಘಟಕರು ದಿನೇಶ್ ಡಿ ನಾಯ್ಕ ನಿರ್ವಹಿಸಿದರು.
ಅರಣ್ಯ ಹಕ್ಕು ಕಾಯಿದೆಗೆ ಗ್ರಹಣ:
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 16 ವರ್ಷಗಳಾದರೂ ಕಾನೂನು ಅನುಷ್ಠಾನದಲ್ಲಿ ವೈಫಲ್ಯ ಕಂಡುಬ0ದಿರುವುದು ವಿಷಾದಕರ. ಕೇವಲ ಶೇ. 2 ರಷ್ಟು ಅರಣ್ಯವಾಸಿಗಳಿಗೆ ಜಿಲ್ಲೆಯಲ್ಲಿ ಹಕ್ಕು ಪತ್ರ ದೊರಕಿದರೇ, ಶೇ. 74.34ರಷ್ಟು ಅರ್ಜಿಗಳು ತೀರಸ್ಕಾರವಾಗಿದ್ದು ಅರಣ್ಯ ಹಕ್ಕು ಕಾಯಿದೆ ಅನುಷ್ಠಾನಕ್ಕೆ ಗ್ರಹಣ ಹಿಡಿದಂತಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.